ತಿರುವನಂತಪುರಂ (ಕೇರಳ) :ಸಿಎಂ ಪಿಣರಾಯಿ ವಿಜಯನ್ ಅವರ ಸರ್ಕಾರ ಮುಖ್ಯಮಂತ್ರಿಗಳ ಪರಿಹಾರ ನಿಧಿ ಹಣದ ದುರ್ಬಳಕೆ ಮತ್ತು ಸ್ವಜನಪಕ್ಷಪಾತ ಮಾಡುತ್ತಿದೆ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಲೋಕಾಯುಕ್ತ ಸೋಮವಾರ ವಜಾ ಮಾಡಿದೆ. ಲೋಕಾಯುಕ್ತ ನ್ಯಾಯಮೂರ್ತಿ ಸಿರಿಯಾಕ್ ಜೋಸೆಫ್ ಮತ್ತು ಉಪ ಲೋಕಾಯುಕ್ತ ನ್ಯಾಯಮೂರ್ತಿಗಳಾದ ಬಾಬು ಮ್ಯಾಥ್ಯೂ ಜೋಸೆಫ್ ಮತ್ತು ಹರುನ್ ಉಲ್ ರಶೀದ್ ಅವರ ತ್ರಿಸದಸ್ಯ ಪೀಠವು ಈ ನಿರ್ಧಾರ ಕೈಗೊಂಡಿದೆ.
ಕೇರಳ ಸಿಎಂ ಮತ್ತವರ ಮಂತ್ರಿಮಂಡಲದ ವಿರುದ್ಧ ಆರ್.ಎಸ್ ಶಶಿಕುಮಾರ್ ಎಂಬುವವರು ನಿಧಿ ದುರ್ಬಳಕೆ ಆರೋಪ ಮಾಡಿ 2019 ರಲ್ಲಿ ಅರ್ಜಿ ಸಲ್ಲಿಸಿದ್ದರು. ಗುರುತರ ಸಮಸ್ಯೆಗಳು ಮತ್ತು ಸಂಕಷ್ಟಗಳಿಗೆ ಬಳಸಿಕೊಳ್ಳಬೇಕಾದ ಪರಿಹಾರ ನಿಧಿಯನ್ನು ಸಿಪಿಎಂ ಸರ್ಕಾರ ಪಕ್ಷದ ವ್ಯಕ್ತಿಗಳಿಗಾಗಿ ಬಳಸಿದೆ. ಇದು ದುರ್ಬಳಕೆಯಾಗಿದ್ದು, ಮುಖ್ಯಮಂತ್ರಿ ಮತ್ತು ಸಚಿವರನ್ನು ಅನರ್ಹಗೊಳಿಸಬೇಕು ಎಂದು ದೂರುದಾರರು ಮನವಿಯಲ್ಲಿ ಕೋರಿದ್ದರು.
ಸಾರ್ವಜನಿಕ ಸೇವೆಯಲ್ಲಿರುವ ಸಿಎಂ ವಿಜಯನ್ ಮತ್ತು ಅವರ ಮಂತ್ರಿಮಂಡಲದ ಕೆಲ ಸಚಿವರು ತಮ್ಮ ಸ್ಥಾನ ಮತ್ತು ಅಧಿಕಾರವನ್ನು ದುರುಪಯೋಗ ಮಾಡಿಕೊಂಡಿದ್ದಾರೆ. ಅವರು ವೈಯಕ್ತಿಕ ಹಿತಾಸಕ್ತಿ, ಪಕ್ಷಪಾತ ಮತ್ತು ಭ್ರಷ್ಟ ಉದ್ದೇಶಗಳಿಗೆ ಪರಿಹಾರ ನಿಧಿ ಬಳಕೆ ಮಾಡಲಾಗಿದೆ ಎಂದು ದೂರುದಾರ ಶಶಿಕುಮಾರ್ ಅವರು ಅರ್ಜಿಯಲ್ಲಿ ದೂರಿದ್ದರು.