ಕೊಚ್ಚಿ (ಕೇರಳ): ಹೆಚ್. ಡಿ.ದೇವೇಗೌಡರ ನೇತೃತ್ವದ ರಾಷ್ಟ್ರೀಯ ನಾಯಕತ್ವದ ನಿಲುವನ್ನು ಜನತಾ ದಳ (ಎಸ್) ಕೇರಳ ಘಟಕವು ಶುಕ್ರವಾರ ತಿರಸ್ಕಾರ ಮಾಡಿದೆ. ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ರಾಷ್ಟ್ರೀಯ ನಾಯಕತ್ವದ ನಿರ್ಧಾರದಿಂದ ಉಂಟಾದ ರಾಜಕೀಯ ಬಿಕ್ಕಟ್ಟನ್ನು ನಿವಾರಿಸಲು ನಾಯಕರು ಸೂಕ್ತ ನಿರ್ಧಾರಕ್ಕೆ ಬರಲು ವಿಫಲರಾಗಿದ್ದಾರೆ. ನಾಯಕತ್ವ ಸಭೆಯ ನಂತರ ಕೇರಳ ಜೆಡಿಎಸ್ ರಾಜ್ಯಾಧ್ಯಕ್ಷ ಮ್ಯಾಥ್ಯೂ ಟಿ. ಥಾಮಸ್ ಅವರು, ''ಮೂಲ ಜೆಡಿಎಸ್, ಹೊಸ ಪಕ್ಷ ಘೋಷಣೆ ಮಾಡುವುದಿಲ್ಲ'' ಎಂದು ಹೇಳಿದ್ದಾರೆ.
ಎರ್ನಾಕುಲಂನ ವೈಎಂಸಿಎ ಸಭಾಂಗಣದಲ್ಲಿ ರಾಜ್ಯ ಮಟ್ಟದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾತನಾಡಿದ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕಾಂಗ ಪಕ್ಷದ ನಾಯಕ ಮ್ಯಾಥ್ಯೂ ಟಿ. ಥಾಮಸ್, ''ಯಾವುದೇ ಸಮಾಲೋಚನೆ ನಡೆಸದೆ ದೇವೇಗೌಡರು ಈ ನಿರ್ಧಾರ ಕೈಗೊಂಡಿದ್ದಾರೆ. ದೇವೇಗೌಡರ ನಿಲುವನ್ನು ವಿರೋಧಿಸುವ ಇತರ ರಾಜ್ಯ ನಾಯಕರನ್ನು ಒಗ್ಗೂಡಿಸಲು ಕೇರಳ ಘಟಕ ಪ್ರಯತ್ನಿಸಲಿದೆ. ಈ ಕ್ರಮದ ಭಾಗವಾಗಿ ಇತರ ರಾಜ್ಯಗಳ ಜೆಡಿಎಸ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದೇನೆ ಎಂದು ಬಹಿರಂಗಪಡಿಸಿದ್ದಾರೆ.
ಹೊಸ ಪಕ್ಷ ಪ್ರಾರಂಭಿಸುವ ಯೋಜನೆಯಿಲ್ಲ:ಬಿಜೆಪಿ ಮೈತ್ರಿ ವಿಚಾರದಲ್ಲಿ ಜೆಡಿ(ಎಸ್)ನ ಕೇರಳ ಘಟಕ ರಾಷ್ಟ್ರೀಯ ನಾಯಕತ್ವವನ್ನು ಖಂಡಿಸಿದ್ದರೂ ಕೂಡ, ಅದು ಇನ್ನೂ ಜನತಾ ದಳ (ಎಸ್) ಭಾಗವಾಗಿಯೇ ಉಳಿದಿದೆ. ಥಾಮಸ್ ಸದ್ಯಕ್ಕೆ ಹೊಸ ಪಕ್ಷ ಕಟ್ಟುವ ಸಾಧ್ಯತೆಯನ್ನು ಅಲ್ಲಗಳೆದಿದ್ದಾರೆ. ''ರಾಷ್ಟ್ರೀಯ ಸಮಿತಿಯು ಅಂಗೀಕರಿಸಿರುವುದರಿಂದ ಕೇರಳ ಘಟಕವು ಹೊಸ ಪಕ್ಷವನ್ನು ಘೋಷಿಸುವುದಿಲ್ಲ'' ಎಂದು ಘೋಷಿಸಿದ್ದಾರೆ.
"ಜೆಡಿಎಸ್ ಕೇರಳದಲ್ಲಿ ರಾಜ್ಯ ಪಕ್ಷವಾಗಿದೆ. ದೇವೇಗೌಡರ ರಾಜಕೀಯ ನಿರ್ಧಾರವನ್ನು ವಿರೋಧಿಸುತ್ತಿರುವ ಸಮಾನ ಮನಸ್ಕ ನಾಯಕರು ಮತ್ತು ಜೆಡಿಎಸ್‌ನ ಇತರ ರಾಜ್ಯ ಘಟಕಗಳೊಂದಿಗೆ ಕೇರಳದ ರಾಷ್ಟ್ರೀಯ ನಾಯಕರು ಚರ್ಚೆ ಮುಂದುವರೆಸುತ್ತಾರೆ. ಕಳೆದ ರಾಜ್ಯ ನಾಯಕತ್ವ ಸಭೆಯು ಬಿಜೆಪಿ ಪರವಾದ ನಿಲುವನ್ನು ಸಾರ್ವಜನಿಕವಾಗಿ ತಿರಸ್ಕರಿಸಿತ್ತು. ನಮ್ಮ ಹಿಂದಿನ ನಿಲುವಿನಲ್ಲಿ ಯಾವುದೇ ಬದಲಾವಣೆ ಇಲ್ಲ. ನಾವು ಯಾವಾಗಲೂ ಬಿಜೆಪಿ ಮತ್ತು ಅದರ ಮಿತ್ರಪಕ್ಷಗಳ ವಿರುದ್ಧ ಹೋರಾಡುತ್ತೇವೆ. ಒಂದು ವೇಳೆ ಪಕ್ಷದ ಶಾಸಕರ ಅನರ್ಹತೆ ವಿಚಾರ ಬಂದರೆ, ಆ ಹಂತದಲ್ಲಿ ಗಮನಿಸಬಹುದು'' ಎಂದು ಥಾಮಸ್ ಪ್ರತಿಕ್ರಿಯಿಸಿದ್ದಾರೆ.