ಕೊಚ್ಚಿ (ಕೇರಳ):ಮಗುವಿನ ಪಿತೃತ್ವ ವಿವಾದದ ಎಲ್ಲಾ ಪ್ರಕರಣಗಳಲ್ಲೂ ಅದನ್ನು ಸಾಬೀತು ಮಾಡಲು ಡಿಎನ್ಎ ಪರೀಕ್ಷೆ ನಡೆಸುವುದಕ್ಕೆ ನ್ಯಾಯಾಲಯಗಳು ನಿರ್ದೇಶನ ನೀಡಬಾರದು ಎಂದು ಕೇರಳ ಹೈಕೋರ್ಟ್ ತಿಳಿಸಿದೆ. ಮಗುವಿನ ಪಿತೃತ್ವ ವಿವಾದ ಕುರಿತ ಪ್ರಕರಣಗಳಲ್ಲಿ ಪಿತೃತ್ವ ನಿರಾಕರಣೆಯಲ್ಲಿ ನಿರ್ದಿಷ್ಟ ಕಾರಣಗಳು ಕಂಡುಬಂದು, ಅದಕ್ಕೆ ಸಾಕಷ್ಟು ಪುರಾವೆಗಳಿಲ್ಲ ಎಂಬಂತಹ ಅನಿವಾರ್ಯ ಪ್ರಕರಣಗಳಲ್ಲಿ ಮಾತ್ರ ಡಿಎನ್ಎ ಪರೀಕ್ಷೆಗೆ ಅವಕಾಶ ನೀಡಬೇಕು ನಿರ್ದೇಶನ ನೀಡಿದೆ.
ನ್ಯಾ.ಎ.ಬದ್ರೀದ್ದೀನ್ ಅವರಿದ್ದ ಪೀಠ ಈ ಆದೇಶ ನೀಡಿದೆ. ಅಪರೂಪ ಮತ್ತು ಅಸಾಧಾರಣ ಪ್ರಕರಣಗಳಲ್ಲಿ ಮತ್ತು ಇಂಥ ಪರೀಕ್ಷೆಯಿಂದ ಮಾತ್ರ ವಿವಾದ ಬಗೆಹರಿಯಲು ಸಾಧ್ಯವಿದೆ ಎನ್ನುವಂತಹ ಪ್ರಕರಣದಲ್ಲಿ ಡಿಎನ್ಎ ಪರೀಕ್ಷೆ ಅಥವಾ ಇತರೆ ವೈಜ್ಞಾನಿಕ ಪರೀಕ್ಷೆಗೆ ನಿರ್ದೇಶಿಸಬಹುದು ಎಂದರು.
ಕೆಲವು ಪ್ರಕರಣದಲ್ಲಿ ಒದಗಿಸಿದ ಸಾಕ್ಷ್ಯ, ಪುರಾವೆಗಳಿಂದ ಪಿತೃತ್ವ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗದೇ ಹೋದರೆ, ಈ ವಿವಾದಗಳನ್ನು ಬಗೆಹರಿಸಲು ಡಿಎನ್ಎ ಪರೀಕ್ಷೆ ಸೂಕ್ತ ಎಂದಾಗ ಮಾತ್ರ ಡಿಎನ್ಎ ಅಥವಾ ಇತರೆ ವೈಜ್ಞಾನಿಕ ಪರೀಕ್ಷೆಗೆ ನ್ಯಾಯಾಲಯ ಸೂಚಿಸಬಹುದು. ಅಂತಹ ಅಗತ್ಯ ಕಂಡುಬಾರದೇ ಇರುವ ಪ್ರಕರಣದಲ್ಲಿ ಸಾಕ್ಷ್ಯಗಳ ಆಧಾರದ ಮೇಲೆ ಪ್ರಕರಣ ನಡೆಸಬಹುದು ಎಂದು ಸಲಹೆ ನೀಡಿತು.
ಪ್ರಕರಣವೇನು?: ಕೌಟುಂಬಿಕ ನ್ಯಾಯಾಲಯದ ಪ್ರಕರಣವೊಂದರಲ್ಲಿ ತನ್ನಿಂದ ದೂರಾದ ಹೆಂಡತಿ ಮತ್ತು ಮಗುವಿಗೆ ಜೀವನಾಂಶ ನೀಡಲು ಸಾಧ್ಯವಿಲ್ಲ. ಆ ಮಗು ತನ್ನದಲ್ಲ ಎಂದು ವಾದಿಸಿ ವ್ಯಕ್ತಿಯೊಬ್ಬರು ಪಿತೃತ್ವ ಪರೀಕ್ಷೆಗೆ ಅವಕಾಶ ನೀಡಬೇಕೆಂದು ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಅರ್ಜಿ ಸಲ್ಲಿಸಿದ ಹೆಂಡತಿ, ಗಂಡ ಜೀವನಾಂಶ ನೀಡಲು ನಿರಾಕರಿಸಿ, ಮಗುವಿನ ಪಿತೃತ್ವದ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ ಎಂದು ಪ್ರತಿವಾದ ಮಾಡಿದ್ದರು. ಈ ಪ್ರಕರಣವನ್ನು ಆಲಿಸಿದ ಕೌಟುಂಬಿಕ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿ, ಹೆಂಡತಿ ಮತ್ತು ಮಗುವಿಗೆ ಜೀವನಾಂಶ ನೀಡಬೇಕು ಎಂದು ಆದೇಶಿಸಿತು. ಈ ಆದೇಶದ ವಿರುದ್ಧ ವ್ಯಕ್ತಿ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು. ಪ್ರಕರಣ ಆಲಿಸಿದ ಕೇರಳ ಉಚ್ಛ ನ್ಯಾಯಾಲಯ ಅರ್ಜಿ ವಜಾಗೊಳಿಸಿ, ಕೌಟುಂಬಿಕ ನ್ಯಾಯಾಲಯ ನಿರ್ಧಾರವನ್ನು ಎತ್ತಿ ಹಿಡಿಯಿತು.
ಇದನ್ನೂ ಓದಿ: ಅಪರಾಧ ಮಾಡಿ, ಶಿಕ್ಷೆ ಪೂರೈಸದೇ ಬಿಡುಗಡೆಯಾಗೋದು ಮೂಲಭೂತ ಹಕ್ಕೇ.. ಬಿಲ್ಕಿಸ್ ಬಾನು ಕೇಸಲ್ಲಿ ಸುಪ್ರೀಂಕೋರ್ಟ್ ಖಡಕ್ ಪ್ರಶ್ನೆ