ಕರ್ನಾಟಕ

karnataka

ETV Bharat / bharat

ಕೇರಳದಲ್ಲಿ ಪಿಎಫ್​ಐ ಹಿಂಸಾಚಾರ.. ನಷ್ಟ ಭರ್ತಿಗಾಗಿ 5 ಕೋಟಿ ವಸೂಲಿಗೆ ಹೈಕೋರ್ಟ್​ ಆದೇಶ - ಆಸ್ತಿ ಹಾನಿ ಬಗ್ಗೆ ದೂರಿದ್ದ ಕೆಎಸ್​ಆರ್​ಟಿಸಿ

ಕೇರಳದಲ್ಲಿ ಪಿಎಫ್​ಐ ನಡೆಸಿದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಉಂಟಾದ ಹಾನಿಗೆ ಪರಿಹಾರವಾಗಿ ನಿಷೇಧಿತ ಸಂಘಟನೆಯಿಂದ 5 ಕೋಟಿ ರೂಪಾಯಿ ವಸೂಲಿ ಮಾಡಲು ಕೇರಳ ಹೈಕೋರ್ಟ್​ ಆದೇಶಿಸಿದೆ. ಇಲ್ಲವಾದಲ್ಲಿ ಅದರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಲೂ ಸೂಚಿಸಿದೆ.

kerala-high-court-asks-pfi
ಕೇರಳದಲ್ಲಿ ಪಿಎಫ್​ಐ ಹಿಂಸಾಚಾರ

By

Published : Sep 29, 2022, 6:01 PM IST

ಕೊಚ್ಚಿ, ಕೇರಳ:ಎನ್​ಐಎ ದಾಳಿ ಮತ್ತು ನಿಷೇಧದಿಂದ ಕುದ್ದು ಹೋಗಿರುವ ನಿಷೇಧಿತ ಸಂಘಟನೆಯಾದ ಪಾಪ್ಯುಲರ್​ ಫ್ರಂಟ್​ ಆಫ್​ ಇಂಡಿಯಾ(ಪಿಎಫ್​ಐ) ಕೇರಳದಲ್ಲಿ ಭಾರೀ ಅರಾಜಕತೆಗೆ ನಡೆಸಿದೆ. ನಿಷೇಧದ ವಿರುದ್ಧ ನಡೆದ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿ ಭಾರಿ ಆಸ್ತಿಪಾಸ್ತಿ ನಷ್ಟ ಉಂಟು ಮಾಡಿದೆ.

ಇದರ ವಿರುದ್ಧ ಕಠಿಣ ಕ್ರಮಕ್ಕೆ ಸೂಚಿಸಿರುವ ಕೇರಳ ಹೈಕೋರ್ಟ್​, ಪ್ರತಿಭಟನೆ ವೇಳೆ ಉಂಟಾದ ಆಸ್ತಿಪಾಸ್ತಿ ನಷ್ಟ ಪರಿಹಾರ ಪಿಎಫ್​ಐನಿಂದಲೇ ವಸೂಲಿ ಮಾಡುವಂತೆ ನಿಷೇಧಿತ ಸಂಘಟನೆಯ ಮೇಲೆ 5.2 ಕೋಟಿ ರೂಪಾಯಿ ದಂಡ ವಿಧಿಸಿದೆ. ಎರಡು ವಾರಗಳಲ್ಲಿ ಈ ಹಣವನ್ನು ಸಂಘಟನೆಯಿಂದ ಪಡೆದುಕೊಳ್ಳಬೇಕು ಎಂದು ಆದೇಶಿಸಿದೆ.

ಪಿಎಫ್‌ಐ ಕರೆ ನೀಡಿದ ಹರತಾಳದಲ್ಲಿ ನಡೆದ ಹಿಂಸಾಚಾರದಿಂದ ಸರ್ಕಾರ ಮತ್ತು ಸಾರ್ವಜನಿಕ ಆಸ್ತಿಗೆ ಆದ ಹಾನಿಗೆ ಪರಿಹಾರವಾಗಿ ನಿಷೇಧಿತ ಸಂಘಟೆಯಿಂದ 5.2 ಕೋಟಿ ಮಾಡಬೇಕು. ಎರಡು ವಾರಗಳಲ್ಲಿ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಈ ಮೊತ್ತವನ್ನು ಜಮಾ ಮಾಡಬೇಕು ಎಂದು ನ್ಯಾಯಮೂರ್ತಿ ಎ.ಕೆ.ಜಯಶಂಕರನ್ ನಂಬಿಯಾರ್ ಮತ್ತು ನ್ಯಾಯಮೂರ್ತಿ ಮೊಹಮ್ಮದ್ ನಿಯಾಸ್ ಸಿಪಿ ಅವರಿದ್ದ ವಿಭಾಗೀಯ ಪೀಠ ಸೂಚಿಸಿದೆ.

ಇದಲ್ಲದೇ, ಹಿಂಸಾಚಾರದಲ್ಲಿ ದಾಖಲಾಗಿರುವ ಎಲ್ಲ ಪ್ರಕರಣಗಳಲ್ಲಿ ಪಿಎಫ್‌ಐ ರಾಜ್ಯ ಕಾರ್ಯದರ್ಶಿ ಎ.ಅಬ್ದುಲ್ ಸತಾರ್ ಅವರನ್ನು ಹೆಚ್ಚುವರಿ ಆರೋಪಿಯನ್ನಾಗಿ ಮಾಡುವಂತೆಯೂ ಕೋರ್ಟ್​ ರಾಜ್ಯ ಸರ್ಕಾರಕ್ಕೆ ಸೂಚಿಸಿದ್ದು, ಹಿಂಸಾಚಾರದ ಪ್ರಕರಣದ ಬಂಧಿತರಿಗೆ ಕಠಿಣ ಜಾಮೀನು ಷರತ್ತುಗಳನ್ನು ವಿಧಿಸಿದೆ.

ಆಸ್ತಿ ಹಾನಿ ಬಗ್ಗೆ ದೂರಿದ್ದ ಕೆಎಸ್​ಆರ್​ಟಿಸಿ:ಪಿಎಫ್​ಐ ನಡೆಸಿದ ಪ್ರತಿಭಟನಾ ಹಿಂಸಾಚಾರದಲ್ಲಿ ಕೇರಳದ ಸಾರಿಗೆ ಇಲಾಖೆಗೆ ಸೇರಿದ 58 ಬಸ್​ಗಳಿಗೆ ಹಾನಿ, 20 ಸಾರಿಗೆ ನೌಕರರಿಗೆ ಗಾಯ ಸೇರಿದಂತೆ 5.2 ಕೋಟಿ ರೂಪಾಯಿ ನಷ್ಟವಾಗಿದೆ. ಇದಕ್ಕೆ ಪರಿಹಾರ ಕೊಡಿಸಬೇಕು ಎಂದು ಕೋರಿ ಕೆಎಸ್‌ಆರ್‌ಟಿಸಿ ಅರ್ಜಿ ಸಲ್ಲಿಸಿತ್ತು.

ಅರ್ಜಿಯನ್ನು ಪರಿಗಣಿಸಿದ ವಿಭಾಗೀಯ ಪೀಠ, ಇಂತಹ ಹಿಂಸಾತ್ಮಕ ಹರತಾಳಗಳು ಮತ್ತು ಬಂದ್‌ಗಳಿಂದ ಸಾರ್ವಜನಿಕರು ತೀವ್ರವಾಗಿ ತೊಂದರೆಗೀಡಾಗಿದ್ದಾರೆ. ಅವರ ಜೀವಕ್ಕೆ ಅಪಾಯವನ್ನುಂಟು ಮಾಡಿದೆ. ಇದು ಸಾಮಾಜಿಕ ಶಾಂತಿಗೆ ಧಕ್ಕೆ ತಂದಿದೆ ಎಂದು ನ್ಯಾಯಪೀಠ ಕಿಡಿಕಾರಿತು.

ಪರಿಹಾರ ಮೊತ್ತದ ಠೇವಣಿಯನ್ನು ವಸೂಲಿ ಮಾಡಿದ ನಂತರವೇ ಹರತಾಳ ಪ್ರಕರಣಗಳ ಆರೋಪಿಗಳಿಗೆ ಜಾಮೀನು ನೀಡಬೇಕು ಎಂದು ಕೇರಳ ಕೋರ್ಟ್​ ರಾಜ್ಯದ ಮ್ಯಾಜಿಸ್ಟ್ರೇಟ್ ಮತ್ತು ಸೆಷನ್ಸ್ ನ್ಯಾಯಾಲಯಗಳಿಗೆ ನಿರ್ದೇಶನ ನೀಡಿದೆ. ಇಲ್ಲವಾದಲ್ಲಿ ಸಂಘಟನೆಗಳಿಗೆ ಸಂಬಂಧಿಸಿದ ಆಸ್ತಿಗಳನ್ನು ಮುಟ್ಟುಗೋಲು, ವಶ ಸೇರಿದಂತೆ ಕಠಿಣ ಕ್ರಮಗಳನ್ನು ಜಾರಿಗೆ ತರಬೇಕು ಎಂದು ಹೇಳಿದೆ.

ಓದಿ:ಸಿದ್ದರಾಮಯ್ಯ ಪಿಎಫ್​ಐ ಬ್ಯಾನ್ ವಿರೋಧಿಸಿದರೆ ಜನರೇ ಒದೆಯುತ್ತಾರೆ: ಪ್ರಹ್ಲಾದ್ ಜೋಶಿ

ABOUT THE AUTHOR

...view details