ಕೊಚ್ಚಿ (ಕೇರಳ): ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ ದೇವಾಲಯ ಪೂಜಾರಿಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕೇರಳ ಹೈಕೋರ್ಟ್ ಎತ್ತಿಹಿಡಿಯಿತು. ನಿರಾಶ್ರಿತ ಕುಟುಂಬವೊಂದಕ್ಕೆ ಆಶ್ರಯ ನೀಡಿದ್ದ ಪೂಜಾರಿ ಬಳಿಕ ಅಪ್ರಾಪ್ತೆಯ ಮೇಲೆ ಒಂದು ವರ್ಷಗಳ ಕಾಲ ನಿರಂತರ ಅತ್ಯಾಚಾರ ನಡೆಸಿರುವುದು ತನಿಖೆಯ ವೇಳೆ ಸಾಬೀತಾಗಿತ್ತು.
ಈ ಪ್ರಕರಣ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿಗಳಾದ ನ್ಯಾ.ಕೆ.ವಿನೋದ್ ಚಂದ್ರನ್ ಮತ್ತು ನ್ಯಾ.ಜಿಯಾದ್ ರೆಹಮನ್ ಅವರಿದ್ದ ಪೀಠ, ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿದ್ದರೂ ಅಪರಾಧಿಗೆ ಪೊಕ್ಸೊ ಕಾಯ್ದೆಯನ್ವಯ ಶಿಕ್ಷೆ ವಿಧಿಸಲು ಸಾಧ್ಯವಿಲ್ಲ. ಸಂತ್ರಸ್ತೆಯ ಮೇಲೆ ಅತ್ಯಾಚಾರ ನಡೆದಿರುವುದು ಸಾಕ್ಷಿಗಳಿಂದ ಈಗಾಗಲೇ ಸಾಬೀತಾಗಿದೆ. ಆದರೆ ಆಕೆಯ ವಯಸ್ಸು ಎಷ್ಟೆಂದು ಸಾಬೀತಾಗಿಲ್ಲ ಎಂದಿದ್ದರು.
ಇದಕ್ಕೂ ಮೊದಲು ಪ್ರಕರಣ ಸಂಬಂಧ ಅಧೀನ ನ್ಯಾಯಾಲಯವು ಅಪರಾಧಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪು ಪ್ರಶ್ನಿಸಿದ್ದ ಪೂಜಾರಿ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದ. ಈ ಮೇಲ್ಮನವಿಯ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್ ಅಧೀನ ನ್ಯಾಯಾಲಯ ನೀಡಿದ್ದ ಜೀವಾವಧಿ ಶಿಕ್ಷೆಯನ್ನು ಎತ್ತಿಹಿಡಿದಿದೆ.