ಎರ್ನಾಕುಲಂ (ಕೇರಳ):ಕೃತಕ ಗರ್ಭಧಾರಣೆಗೆ ಈಗಿರುವ ವಯೋಮಿತಿಯನ್ನು ಮರುಪರಿಶೀಲಿಸುವಂತೆ ಕೇಂದ್ರ ಸರ್ಕಾರಕ್ಕೆ ಕೇರಳ ಹೈಕೋರ್ಟ್ ಸೂಚನೆ ನೀಡಿದೆ. ಸಂತಾನ ಪಡೆಯಲು ಹಲವು ದಂಪತಿ ಸಲ್ಲಿಸಿದ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್, ಈಗಿರುವ ಮಾನದಂಡದ ಆಧಾರಕ್ಕಿಂತಲೂ ಹೆಚ್ಚಿನ ವಯೋಮಾನದ ಅವಕಾಶ ನೀಡಲು ಸಾಧ್ಯವೇ ಎಂಬುದನ್ನು ಪರಿಶೀಲಿಸಿ ವರದಿ ಸಲ್ಲಿಸಿ ಎಂದು ಸೂಚಿಸಿದೆ. ಸದ್ಯ ಕೃತಕ ಗರ್ಭಧಾರಣೆ ಹೊಂದಲು ದೇಶದಲ್ಲಿ ಮಹಿಳೆಯ ವಯಸ್ಸು 50 ಮತ್ತು ಪುರುಷನ ವಯಸ್ಸು 55 ಇದೆ. ಇದು ಈಗಿನ ಜೀವನಶೈಲಿಗೆ ಸಾಕಾಗುತ್ತಿಲ್ಲ. ಹೀಗಾಗಿ ಈ ವಯೋಮಾನದ ಮಿತಿಯನ್ನು ಹೆಚ್ಚಿಸಬೇಕು ಎಂದು ಕೋರಿ ಹಲವು ಅರ್ಜಿಗಳು ಹೈಕೋರ್ಟ್ಗೆ ಬಂದಿವೆ.
ಈ ಅರ್ಜಿಗಳ ವಿಚಾರಣೆ ನಡೆಸಿದ ಕೋರ್ಟ್ ಕೃತಕ ಗರ್ಭಧಾರಣೆ ಕುರಿತು ಕೇಂದ್ರ ಸರ್ಕಾರಕ್ಕೆ ಸಲಹೆ ನೀಡುವ ನ್ಯಾಷನಲ್ ಅಸಿಸ್ಟೆಡ್ ರಿಪ್ರೊಡಕ್ಟಿವ್ ಟೆಕ್ನಾಲಜಿ ಮತ್ತು ಬಾಡಿಗೆ ತಾಯ್ತನ ಮಂಡಳಿ ಈ ಕುರಿತು ಅಧ್ಯಯನ ನಡೆಸಿ, ಮೂರು ತಿಂಗಳಲ್ಲಿ ಕೇಂದ್ರ ಸರ್ಕಾರಕ್ಕೆ ವರದಿ ನೀಡಬೇಕು ಎಂದು ನ್ಯಾಯಮೂರ್ತಿ ವಿ.ಜಿ.ಅರುಣ್ ಅವರು ಆದೇಶಿಸಿದ್ದಾರೆ. 2022 ರ ಜನವರಿ 25 ರಂದು ಜಾರಿಯಾದ ಹೊಸ ನಿಯಮದಂತೆ 55 ವರ್ಷಕ್ಕೆ ವಯಸ್ಸಿನ ಮಿತಿಯನ್ನು ನಿಗದಿಪಡಿಸಿದೆ. ಇದರ ಕಡ್ಡಾಯ ಪಾಲನೆ ಸಾಧ್ಯವಿಲ್ಲ. ಈಗಾಗಲೇ ಚಿಕಿತ್ಸೆಯಲ್ಲಿರುವ ದಂಪತಿ ಈ ನಿಯಮದಿಂದ ತೊಂದರೆಗೆ ಒಳಗಾಗಲಿದ್ದಾರೆ. ಇದು ಸಂವಿಧಾನ ನೀಡಿರುವ ವೈಯಕ್ತಿಕ ಸ್ವಾತಂತ್ರ್ಯಕ್ಕೂ ವಿರುದ್ಧವಾಗಿದೆ ಎಂದು ಅರ್ಜಿಯಲ್ಲಿ ತಕರಾರು ಸಲ್ಲಿಸಲಾಗಿತ್ತು.
ಮಕ್ಕಳಿಗೆ ಜನ್ಮ ನೀಡುವುದು ಮತ್ತು ಕುಟುಂಬವನ್ನು ಬೆಳೆಸುವುದು ಮೂಲಭೂತ ಹಕ್ಕಾಗಿದೆ. ವಯಸ್ಸಿನ ಮಿತಿಯು ಆ ಹಕ್ಕನ್ನು ಮೊಟಕುಗೊಳಿಸುತ್ತದೆ. ಇದಲ್ಲದೇ, ಪ್ರಸ್ತುತ ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿರುವವರಿಗೆ ರಿಯಾಯಿತಿ ನೀಡದಿರುವ ನಿಯಮ ಸರ್ವಾಧಿಕಾರ ಮತ್ತು ಅತಾರ್ಕಿಕವಾಗಿದೆ. ನಿಯಮ ಜಾರಿಗೆ ಬಂದಾಗ ಅನೇಕರು ಚಿಕಿತ್ಸೆ ಪಡೆಯುತ್ತಿರುವುದು ಹೈಕೋರ್ಟ್ ಗಮನಕ್ಕೆ ತರಲಾಗಿದೆ.