ಎರ್ನಾಕುಲಂ (ಕೇರಳ): ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ರ ವಿವಾದಾತ್ಮಕ ನಿರ್ಧಾರಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ಬಗ್ಗೆ ಕೇರಳ ಹೈಕೋರ್ಟ್ ಕೇಂದ್ರ ಸರ್ಕಾರದಿಂದ ವಿವರಣೆ ಕೋರಿದೆ.
ಅಲ್ಲದೆ, ಹೊಸ ನಿಯಮಗಳನ್ನು ಜಾರಿಗೊಳಿಸದಂತೆ ಲಕ್ಷದ್ವೀಪ ಆಡಳಿತಕ್ಕೆ ನಿರ್ದೇಶನ ನೀಡಬೇಕೆಂದು ಕೆಪಿಸಿಸಿ ಕಾರ್ಯದರ್ಶಿ ನೌಶಾದ್ ಅಲಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ತಿರಸ್ಕರಿಸಿದೆ.
ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಜಾರಿಗೊಳಿಸಿರುವ ನೀತಿಗೆ ತೀವ್ರ ವಿರೋಧ ವ್ಯಕ್ತವಾಗತೊಡಗಿದೆ. ಅಲ್ಲದೆ ಕಾಂಗ್ರೆಸ್, ಸಿಪಿಎಂ ಸೇರಿದಂತೆ ಬಹುತೇಕ ವಿರೋಧ ಪಕ್ಷಗಳು ಈ ಬೆಳವಣಿಗೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸುತ್ತಿವೆ.
ವಿವಾದಕ್ಕೆ ಕಾರಣವಾದ ಅಂಶಗಳು:
ಮುಸ್ಲಿಂ ಸಮುದಾಯ ಅಧಿಕವಾಗಿರುವ ಲಕ್ಷದ್ವೀಪದಲ್ಲಿ ಆಡಳಿತಾಧಿಕಾರಿ ಪ್ರಫುಲ್ ಪಟೇಲ್ ಅವರು ಜಾರಿಗೆ ತಂದ ನೀತಿಗಳು ವಿವಾದಕ್ಕೆ ಕಾರಣವಾಗಿವೆ.
- ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಗೋ ಮಾಂಸ ಮಾರಾಟ ನಿಷೇಧ
- ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟದಲ್ಲಿ ಮಾಂಸಾಹಾರ ನಿಷೇಧ
- ಅಪರಾಧ ಪ್ರಕರಣ ಕಡಿಮೆ ಇರುವ ದ್ವೀಪಪ್ರದೇಶದಲ್ಲಿ ಗೂಂಡಾ ಕಾಯ್ದೆ ಜಾರಿ
- ಇಬ್ಬರಿಗಿಂತ ಹೆಚ್ಚು ಮಕ್ಕಳನ್ನು ಹೊಂದಿರುವ ಪಂಚಾಯತ್ ಮತದಾನ ಆಕಾಂಕ್ಷಿಗಳನ್ನು ಅನರ್ಹಗೊಳಿಸಬೇಕು
- ಅಭಿವೃದ್ಧಿ ಯೋಜನೆಗಳಿಗಾಗಿ ಖಾಸಗಿಯವರಿಂದ ಭೂಮಿ ವಶಪಡಿಸಿಕೊಳ್ಳಲು ಅಭಿವೃದ್ಧಿ ಪ್ರಾಧಿಕಾರ ಸ್ಥಾಪನೆ
- ಲಕ್ಷದ್ವೀಪ ಅಭಿವೃದ್ಧಿ ಪ್ರಾಧಿಕಾರ-2021 ರಚನೆ
- ಲಕ್ಷದ್ವೀಪದಲ್ಲಿ ಮದ್ಯ ಮಾರಾಟಕ್ಕೆ ಅವಕಾಶ