ಎರ್ನಾಕುಲಂ (ಕೇರಳ): ಐವಿಎಫ್ (ಇನ್ ವಿಟ್ರೋ ಫರ್ಟಿಲೈಸೇಶನ್) ಚಿಕಿತ್ಸೆಗಾಗಿ ಜೀವಾವಧಿ ಶಿಕ್ಷೆಗೊಳಗಾದ ಅಪರಾಧಿಯೊಬ್ಬನಿಗೆ ಕೇರಳ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿದೆ. ಕಳೆದ ಏಳು ವರ್ಷಗಳಿಂದ ವಿಯ್ಯೂತರು ಸೆಂಟ್ರಲ್ ಜೈನಿನಲ್ಲಿದ್ದ ವ್ಯಕ್ತಿಗೆ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಅವರಿದ್ದ ಏಕಸದಸ್ಯ ಪೀಠ 15 ದಿನಗಳ ಪೆರೋಲ್ಗೆ ಅನುಮತಿ ನೀಡಿದೆ.
ಅಪರಾಧಿಯ ಪತ್ನಿ ತನಗೆ ಪತಿಯಿಂದ ಮಗು ಬೇಕು ಎಂದು ಆತನಿಗೆ ಪೆರೋಲ್ ನೀಡುವಂತೆ ಕೋರಿ ನ್ಯಾಯಾಲಯದ ಮೊರೆ ಹೋಗಿದ್ದರು. ಮಹಿಳೆಯ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಹೈಕೋರ್ಟ್ ಪೆರೋಲ್ ಮಂಜೂರು ಮಾಡಿದೆ. ಮಹಿಳೆಯೊಬ್ಬರ ನೈಜ ವಿನಂತಿಯನ್ನು ಕೇವಲ ತಾಂತ್ರಿಕ ಅಂಶಗಳನ್ನು ಪರಿಗಣಿಸಿ ತಿರಸ್ಕರಿಸಲು ಸಾಧ್ಯವಿಲ್ಲ. ಜೈಲಿನಲ್ಲಿರುವ ತನ್ನ ಪತಿಯಿಂದ ಮಗು ಬೇಕು ಎಂದು ಮಹಿಳೆಯೊಬ್ಬರು ನ್ಯಾಯಾಲಯದ ಮುಂದೆ ಬಂದಾಗ ತಾಂತ್ರಿಕ ಕಾರಣಗಳನ್ನು ನೀಡಿ, ಮನವಿಯನ್ನು ನಿರ್ಲಕ್ಷಿಸಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಯಾವುದೇ ಕ್ರಮಿನಲ್ ಪ್ರಕರಣದಲ್ಲಿ ಶಿಕ್ಷೆಗೆ ಒಳಗಾದ ವ್ಯಕ್ತಿ ಜೈಲಿನಿಂದ ಹೊರಬಂದ ನಂತರ ಆತನನ್ನು ವಿಭಿನ್ನವಾಗಿ ನೋಡುವ ಅಗತ್ಯವಿಲ್ಲ. ಆ ವ್ಯಕ್ತಿಗೆ ಇತರ ನಾಗರಿಕರಂತೆ ಸಭ್ಯ ಜೀವನ ನಡೆಸಲು ಹಕ್ಕಿದೆ ಎಂದು ಕೇರಳ ಹೈಕೋರ್ಟ್ ಹೇಳಿದೆ. ಪಬ್ಲಿಕ್ ಪ್ರಾಸಿಕ್ಯೂಟರ್ ಮನವಿಯನ್ನು ವಿರೋಧಿಸಿದ್ದು, ಅಪರಾಧಿ ಪೆರೋಲ್ಗೆ ಅರ್ಹನಲ್ಲ ಎಂದು ವಾದಿಸಿದರು.
ಜೊತೆಗೆ ಮಹಿಳೆ ಸಲ್ಲಿಸಿರುವ ವೈದ್ಯಕೀಯ ಪ್ರಮಾಣಪತ್ರಗಳಿಂದ ಅರ್ಜಿದಾರರ ಮನವಿಯ ನೈಜತೆಯನ್ನು ಅರಿತು ನ್ಯಾಯಾಲಯ ಪೆರೋಲ್ ನೀಡಿದೆ. ಈ ಹಿಂದೆ ಅಪರಾಧಿಯ ಪತ್ನಿ 3 ತಿಂಗಳ ಕಾಲ ಪೆರೋಲ್ ನೀಡುವಂತೆ ಸಂಬಂಧಪಟ್ಟ ಅಧಿಕಾರಿಗಳನ್ನು ಯಾವುದೇ ಪ್ರಯೋಜನವಾಗಿರಲಿಲ್ಲ. ಹಾಗಾಗಿ ನಂತರ ಆಕೆ ನ್ಯಾಯಾಲಯದ ಮೆಟ್ಟಿಕೇರಿದ್ದಳು. ಇದೀಗ ಮಹಿಳೆಯ ಮನವಿಯನ್ನು ಆಲಿಸಿರುವ ನ್ಯಾಯಾಲಯ, ಅಪರಾಧಿಗೆ ಪೆರೋಲ್ ನೀಡುವಂತೆ, ಹಾಗೂ ಎರಡು ವಾರಗಳಲ್ಲಿ ಕ್ರಮ ಕೈಗೊಳ್ಳುವಂತೆ ಜೈಲು ಡಿಜಿಪಿಗೆ ಸೂಚಿಸಿದೆ.