ತಿರುವನಂತಪುರಂ (ಕೇರಳ): ಎಲ್ಲ ರಾಜ್ಯದ ಸಾರ್ವಜನಿಕ ವಲಯದ ಸಂಸ್ಥೆಗಳ (ಪಿಎಸ್‌ಯು) ನೌಕರರ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ಹೆಚ್ಚಿಸುವ ನಿರ್ಧಾರವನ್ನು ಕೇರಳ ಸರ್ಕಾರ ಹಿಂಪಡೆಯುವುದಾಗಿ ಬುಧವಾರ ಪ್ರಕಟಿಸಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಿಎಂ ಕಾರ್ಯಾಲಯ ತಿಳಿಸಿದೆ.
ಎಲ್‌ಡಿಎಫ್ ಸರ್ಕಾರದ ನಿರ್ಧಾರವು ಸಾರ್ವಜನಿಕ ವಲಯದಲ್ಲಿ ವೃತ್ತಿಜೀವನದ ಕನಸು ಕಾಣುತ್ತಿರುವ ರಾಜ್ಯದ ಯುವಕರಿಗೆ ಮಾಡಿದ ದ್ರೋಹ ಎಂದು ಪ್ರತಿಪಕ್ಷ ಕಾಂಗ್ರೆಸ್ ಮತ್ತು ಬಿಜೆಪಿ ಆರೋಪಿಸಿದ್ದವು. ಅಲ್ಲದೇ, ಸರ್ಕಾರದ ನಿರ್ಧಾರವನ್ನು ತೀವ್ರವಾಗಿ ಖಂಡಿಸಿದ್ದವು. ಇದರ ಬೆನ್ನಲ್ಲೇ ಸರ್ಕಾರ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಆದೇಶವನ್ನು ವಾಪಸ್ ಪಡೆದಿದೆ.