ತಿರುವನಂತಪುರಂ(ಕೇರಳ): ಸರ್ಕಾರಿ ನೌಕರರು ವೈಯಕ್ತಿಕ ಯೂಟ್ಯೂಬ್ ಚಾನಲ್ ಆರಂಭಿಸುವಂತಿಲ್ಲ ಎಂದು ಕೇರಳ ಸರ್ಕಾರ ಆದೇಶ ಹೊರಡಿಸಿದೆ. ಸೇವಾ ನಿಯಮ ಉಲ್ಲಂಘನೆಯ ಆಧಾರದಲ್ಲಿ ಸರ್ಕಾರ ಈ ಆದೇಶ ಜಾರಿಗೊಳಿಸಿದೆ. ಯೂಟ್ಯೂಬ್ ಚಾನಲ್‌ಗಳಿಂದ ಸರ್ಕಾರಿ ಹೆಚ್ಚುವರಿ ಆದಾಯ ಗಳಿಸುವುದನ್ನು ತಡೆಯುವ ಉದ್ದೇಶದಿಂದ ಸರ್ಕಾರ ಈ ನಿಯಮ ಜಾರಿ ಮಾಡಿದೆ. ಫೆಬ್ರವರಿ 3 ರಂದು ರಾಜ್ಯ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಈ ಕುರಿತು ಆದೇಶ ಹೊರಡಿಸಿದ್ದಾರೆ. ಆದೇಶದ ಪ್ರಕಾರ, ಯೂಟ್ಯೂಬ್ ಚಾನಲ್ ಅನ್ನು ಪ್ರಾರಂಭಿಸುವುದು ಕೇರಳ ಸರ್ಕಾರಿ ನೌಕರರ ನಡವಳಿಕೆ ನಿಯಮಗಳು, 1960 ರ ಉಲ್ಲಂಘನೆಯಾಗಿದೆ. YouTube ಚಾನಲ್‌ಗಳನ್ನು ಪ್ರಾರಂಭಿಸಲು ಪ್ರಸ್ತುತ ನಿಯಮಗಳಡಿ ಅನುಮತಿ ನೀಡಲು ಸಾಧ್ಯವಿಲ್ಲ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಕಲಾತ್ಮಕ ಕೆಲಸವನ್ನು ಪೋಸ್ಟ್ ಮಾಡಲು ಅನುಮತಿ ಕೋರಿ ಅಗ್ನಿಶಾಮಕ ರಕ್ಷಣಾ ಸೇವೆ ಸಲ್ಲಿಸಿದ ಅರ್ಜಿಗೆ ಪ್ರತಿಕ್ರಿಯೆಯಾಗಿ ಈ ಆದೇಶ ಬಂದಿದೆ. ಅಗ್ನಿಶಾಮಕ ರಕ್ಷಣಾ ಸೇವೆಗೆ ಅನುಮತಿ ನಿರಾಕರಿಸಿ ಆದೇಶ ಹೊರಡಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಜನರು ಯೂಟ್ಯೂಬ್ ಚಾನಲ್‌ಗಳ ಮೂಲಕ ಹೆಚ್ಚುವರಿ ಆದಾಯ ಗಳಿಸುತ್ತಿದ್ದಾರೆ. 12 ತಿಂಗಳುಗಳಲ್ಲಿ ಕನಿಷ್ಠ 1,000 ಜನರು ವ್ಯಕ್ತಿಯೊಬ್ಬನ ಯೂಟ್ಯೂಬ್ ಚಾನಲ್‌ಗೆ ಚಂದಾದಾರರಾಗಿದ್ದರೆ ಮತ್ತು ಅದನ್ನು 4,000 ಗಂಟೆಗಳ ಕಾಲ ವೀಕ್ಷಿಸಿದರೆ, ಚಾನಲ್ ಅನ್ನು ನಡೆಸುವ ವ್ಯಕ್ತಿ ಹಣ ಗಳಿಸಲು ಅರ್ಹನಾಗುತ್ತಾನೆ.
ಕೇರಳ ಸರ್ಕಾರದ ಪ್ರಕಾರ, ಹೀಗೆ ಯೂಟ್ಯೂಬ್ನಿಂದ ಹಣ ಗಳಿಸುವುದು ಸರ್ಕಾರಿ ನೌಕರರ ಸೇವಾ ನಿಯಮಗಳ ಉಲ್ಲಂಘನೆಯಾಗಿದೆ. ಹೀಗಾಗಿ ಉದ್ಯೋಗಿಗಳಿಗೆ ಸ್ವಂತ ಯೂಟ್ಯೂಬ್ ಚಾನಲ್ ಆರಂಭಿಸಲು ಅವಕಾಶ ನೀಡುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.