ತಿರುವನಂತಪುರಂ: ಕೇರಳ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್ ಭಾನುವಾರ ಶಬರಿಮಲೆ ದೇಗುಲಕ್ಕೆ ಭೇಟಿ ನೀಡಿ, ಅಯ್ಯಪ್ಪ ಸ್ವಾಮಿ ದರ್ಶನ ಪಡೆದರು.
ಐದು ಕಿಲೋಮೀಟರ್ ಚಾರಣ ಮಾಡಿ ಬೆಟ್ಟಕ್ಕೆ ಆಗಮಿಸಿದ ಅವರು, ಸಾಂಪ್ರದಾಯಿಕ ಮಣಿಮಾಲೆ ಧರಿಸಿದ್ದರು. ಎಲ್ಲಾ ಭಕ್ತರಂತೆ ಇರುಮುಡಿ ಕಟ್ಟನ್ನು ತಮ್ಮ ತಲೆಯ ಮೇಲೆ ಹೊತ್ತುಕೊಂಡು ಹೋಗಿ ಅಯ್ಯಪ್ಪ ಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು.
ಶಬರಿಮಲೆ ವಿವಾದ, ಕೋರ್ಟ್ ತೀರ್ಪು:
10ರಿಂದ 50 ವರ್ಷ ವಯಸ್ಸಿನ ಮಹಿಳೆಯರು ಅಯ್ಯಪ್ಪ ದೇವಸ್ಥಾನ ಪ್ರವೇಶಿಸಲು 2018ರಲ್ಲಿ ಸುಪ್ರೀಂಕೋರ್ಟ್ ವಿವಾದಿತ ತೀರ್ಪು ನೀಡಿತ್ತು. ಈ ತೀರ್ಪನ್ನು ರಾಜ್ಯದಲ್ಲಿ ಜಾರಿಗೆ ತರುವುದಾಗಿ ಪಿಣರಾಯಿ ವಿಜಯನ್ ಸರ್ಕಾರ ಕೂಡ ಘೋಷಿಸಿತ್ತು.
ಆದರೆ, ಸುಪ್ರೀಂಕೋರ್ಟ್ ತೀರ್ಪು ವಿರೋಧಿಸಿ ಬಿಜೆಪಿ ಹಾಗೂ ಆರ್ಎಸ್ಎಸ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು. ಅಯ್ಯಪ್ಪ ಭಕ್ತರು, ಶಬರಿಮಲೆ ಅಯ್ಯಪ್ಪ ದೇಗುಲ ಪ್ರವೇಶಿಸಲು ಯತ್ನಿಸಿದ ಮಹಿಳೆಯರನ್ನು ತಡೆದರು. ಏತನ್ಮಧ್ಯೆ, ಈ ವಿಷಯವನ್ನು ಸುಪ್ರೀಂಕೋರ್ಟ್ ನ್ಯಾಯಪೀಠವು ಮರುಪರಿಶೀಲಿಸುತ್ತಿದೆ.
ಧಾರ್ಮಿಕ ನಂಬಿಕೆಗೆ ಪರ-ವಿರೋಧ:
ಸಂಪ್ರದಾಯಗಳ ಪ್ರಕಾರ, ಅಯ್ಯಪ್ಪ ಸ್ವಾಮಿ ಬ್ರಹ್ಮಚಾರಿಯಾಗಿದ್ದು ಮುಟ್ಟಿನ ವಯಸ್ಸಿನ ಮಹಿಳೆಯರಿಗೆ ದೇವಾಲಯ ಪ್ರವೇಶಿಸಲು 800 ವರ್ಷಗಳ ಹಿಂದಿನಿಂದಲೂ ಅವಕಾಶವಿರಲಿಲ್ಲ.ಇದಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದನ್ನೂ ಓದಿ:ದಾಖಲೆ ಸಂಖ್ಯೆಯಲ್ಲಿ ಕೋವಿಡ್ ಸಾವು-ನೋವು: ನಿನ್ನೆ 1.68 ಲಕ್ಷ ಕೇಸ್ ಪತ್ತೆ, 904 ಮಂದಿ ಬಲಿ