ತಿರುವನಂತಪುರ: 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ 60 ದಿನಗಳ ಹೆರಿಗೆ ರಜೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ಮಾಸಿಕ ಋತುಚಕ್ರದ ರಜೆಯನ್ನು ಕೇರಳ ಸರ್ಕಾರ ಘೋಷಿಸಿದೆ ಎಂದು ಉನ್ನತ ಶಿಕ್ಷಣ ಸಚಿವೆ ಆರ್.ಬಿಂದು ಗುರುವಾರ ತಿಳಿಸಿದ್ದಾರೆ. 18 ವರ್ಷ ಮೇಲ್ಪಟ್ಟ ವಿದ್ಯಾರ್ಥಿನಿಯರಿಗೆ ಗರಿಷ್ಠ 60 ದಿನಗಳ ಕಾಲ ಮಾತೃತ್ವ ರಜೆ ನೀಡಲಾಗುವುದು. ಈ ವಿದ್ಯಾರ್ಥಿನಿಯರ ಹಾಜರಾತಿ ಶೇ 72ರಷ್ಟಿದ್ದರೆ ಅವರು ಪರೀಕ್ಷೆ ಬರೆಯಬಹುದು ಎಂದರು. ಇನ್ನು ಮಾಸಿಕ ಋತುಚಕ್ರದ ರಜೆಯಲ್ಲೂ ಇದೇ ನೀತಿಯನ್ನು ಅನುಸರಿಸಲಾಗಿದೆ. ಈ ಮೊದಲು ವಿದ್ಯಾರ್ಥಿಗಳಿಗೆ ಶೇ 75ರಷ್ಟು ರಜೆ ಕಡ್ಡಾಯವಾಗಿತ್ತು. ಇದೀಗ ಮುಟ್ಟಿನ ರಜೆ ಸೇರಿ ಶೇ 73ರಷ್ಟು ಹಾಜರಾತಿ ಕಡ್ಡಾಯವಾಗಿದೆ ಎಂದು ಅವರು ವಿವರಿಸಿದರು.
ಕೊಚ್ಚಿನ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯ (ಸಿಯುಎಎಸ್ಎಟಿ) ಜನವರಿ 14ರಂದು ವಿಶ್ವ ವಿದ್ಯಾಲಯದ ವಿದ್ಯಾರ್ಥಿನಿಯರಿಗೆ ಮಾಸಿಕ ಋತುಚಕ್ರ ರಜೆ ಘೋಷಿಸಿತ್ತು. ಇದಾದ ನಂತರ ರಾಜ್ಯ ಸರ್ಕಾರ ಕೂಡ ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಮಹಿಳೆಯರಿಗೆ ಮುಟ್ಟಿನ ರಜೆ ನೀಡಲು ಮುಂದಾಗಿದೆ ಎಂದು ಸಚಿವರು ತಿಳಿಸಿದರು. ಈ ಹೇಳಿಕೆಯ ತರುವಾಯ ಹಾಜರಾತಿ ಕಡ್ಡಾಯದ ಕುರಿತು ಅವರು ಮಾಹಿತಿ ನೀಡಿದ್ದಾರೆ.
ಮಾಸಿಕ ಋತುಚಕ್ರದ ಸಮಯದಲ್ಲಿ ಮಹಿಳೆಯರು ಮಾನಸಿಕ ಮತ್ತು ದೈಹಿಕ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ. ಈ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಉನ್ನತ ಶಿಕ್ಷಣ ಇಲಾಖೆ ಅಡಿಯಲ್ಲಿ ಮುಟ್ಟಿನ ರಜೆ ಘೋಷಿಸಲು ಸರ್ಕಾರ ಮುಂದಾಗಿದೆ ಎಂದು ಸಚಿವೆ ಬಿಂದು ಪ್ರಕಟಣೆಯಲ್ಲಿಯೂ ಹೇಳಿದ್ದಾರೆ.