ತಿರುವನಂತಪುರಂ(ಕೇರಳ): ಚಿನ್ನ ಕಳ್ಳಸಾಗಣೆ ಪ್ರಕರಣದ ಪ್ರಮುಖ ಆರೋಪಿ ಎನ್ನಲಾದ ಸ್ವಪ್ನಾ ಸುರೇಶ್ ಶನಿವಾರ ಮಾಧ್ಯಮದವರನ್ನು ಉದ್ದೇಶಿಸಿ ಮಾತನಾಡುವಾಗ ಗಳಗಳನೆ ಕಣ್ಣೀರು ಸುರಿಸಿದರು. 'ಈ ರೀತಿ ನನ್ನ ಮೇಲೆ ಯಾಕೆ ದಾಳಿ ಮಾಡುತ್ತಿದ್ದೀರಿ? ನಾನು ಈಗಾಗಲೇ ನೀಡಿರುವ ಹೇಳಿಕೆಗೆ ಬದ್ಧಳಾಗಿದ್ದೇನೆ. ನನ್ನೊಂದಿಗಿರುವ ಜನರನ್ನು ನೋಯಿಸಬೇಡಿ. ನೀವು ನನ್ನನ್ನು ನೋಯಿಸಿ, ಬೇಕಾದರೆ ಕೊಂದು ಹಾಕಿ ಈ ಪ್ರಕರಣವನ್ನು ಮುಗಿಸಿಬಿಡಿ' ಎಂದು ತೀವ್ರ ಬೇಸರ ತೋಡಿಕೊಂಡರು.
ತಮ್ಮ ವಕೀಲರಾದ ಆರ್.ಕೃಷ್ಣರಾಜ್ ವಿರುದ್ಧದ ಪ್ರಕರಣದ ಬಗ್ಗೆ ವಿವರಿಸಲು ಅವರು ಮಾಧ್ಯಮಗಳೊಂದಿಗೆ ಮಾತನಾಡುತ್ತಿದ್ದರು. ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಬೆದರಿಕೆ ಹಾಕಿರುವ ಫೇಸ್‌ಬುಕ್ ಪೋಸ್ಟ್‌ಗೆ ಸಂಬಂಧಿಸಿದಂತೆ ಕೃಷ್ಣರಾಜ್ ವಿರುದ್ಧ ಪೊಲೀಸರು ಜಾಮೀನುರಹಿತ ಮೊಕದ್ದಮೆ ದಾಖಲಿಸಿದ್ದರು. ತನ್ನ ವಕೀಲರ ಸಂಭಾವ್ಯ ಬಂಧನವು ತನ್ನನ್ನು ಪ್ರತ್ಯೇಕಿಸಲು ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಆರೋಪಿಸಿದರು.
ಕೇರಳ ರಾಜ್ಯ ಮಾತ್ರವಲ್ಲ, ದೇಶಾದ್ಯಂತ ಭಾರಿ ಸದ್ದು ಮಾಡಿರುವ ಚಿನ್ನ ಅಕ್ರಮ ಕಳ್ಳಸಾಗಣೆ ಹಗರಣಕ್ಕೆ ಸಂಬಂಧಿಸಿದಂತೆ, ಪ್ರಕರಣದ ಪ್ರಮುಖ ಆರೋಪಿ ಸ್ವಪ್ನಾ ಸುರೇಶ್ ಅವರು ಕೇರಳ ಸಿಎಂ ಪಿಣರಾಯಿ ವಿಜಯನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪಿಣರಾಯಿ ವಿಜಯನ್ ಅವರ ದಲ್ಲಾಳಿ ಎಂದೇ ಆರೋಪಿಸಲಾಗಿರುವ ಶಾಜ್ ಕಿರಣ್ ಎಂಬುವರು ತಮಗೆ ಮಾನಸಿಕ ಹಿಂಸೆ ನೀಡಿದ್ದಾರೆ ಎಂದು ಸ್ವಪ್ನಾ ಸುರೇಶ್ ದೂರಿದ್ದಾರೆ. ಕೇರಳ ಹೈಕೋರ್ಟ್‌ಗೆ ತಾನು ನೀಡಿರುವ ರಹಸ್ಯ ಹೇಳಿಕೆಯನ್ನು ಹಿಂಪಡೆಯುವಂತೆಯೂ ಒತ್ತಾಯಿಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.