ನವದೆಹಲಿ: ಕೇರಳ, ತಮಿಳುನಾಡು, ಮಹಾರಾಷ್ಟ್ರ ಮತ್ತು ಗೋವಾದಂತಹ ಅನೇಕ ರಾಜ್ಯಗಳು ಸೋಮವಾರದಿಂದ ಒಂದು ವಾರದವರೆಗೆ ಲಾಕ್‌ಡೌನ್ ಅಥವಾ ಇತರ ನಿರ್ಬಂಧಗಳನ್ನು ವಿಸ್ತರಿಸಿವೆ. ದೆಹಲಿ, ಮಧ್ಯಪ್ರದೇಶ ಮತ್ತು ಹಿಮಾಚಲ ಪ್ರದೇಶದಲ್ಲಿ ಜನರಿಗೆ ಕೆಲವು ವಿನಾಯಿತಿ ನೀಡಲಾಗಿದೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೂನ್ 9 ರವರೆಗೆ ಲಾಕ್‌ಡೌನ್ ವಿಸ್ತರಿಸುವುದಾಗಿ ಘೋಷಿಸಿದ್ದಾರೆ. ಪುದುಚೇರಿ ಸರ್ಕಾರವು ಜೂನ್ 7 ರವರೆಗೆ ಲಾಕ್‌ಡೌನ್ ಮುಂದುವರಿಸಲು ನಿರ್ಧರಿಸಿದೆ. ತಮಿಳುನಾಡು, ಕರ್ನಾಟಕದಲ್ಲಿ ಈಗಾಗಲೇ ಲಾಕ್‌ಡೌನ್ ಜೂನ್ 7 ರವರೆಗೆ ವಿಸ್ತರಿಸಲಾಗಿದೆ.
ಕೊರೊನಾ ಹರಡುವಿಕೆಯು ರಾಜ್ಯದಲ್ಲಿ ಗಮನಾರ್ಹವಾಗಿ ಕ್ಷೀಣಿಸುತ್ತಿದ್ದರೂ, ನಿರ್ಬಂಧಗಳನ್ನು ತೆಗೆದುಹಾಕುವ ಹಂತವನ್ನು ನಾವು ಇನ್ನೂ ತಲುಪಿಲ್ಲ. ಮೇ 31 ರಿಂದ ಜೂನ್ 9 ರವರೆಗೆ ಎಲ್ಲಾ ಜಿಲ್ಲೆಗಳಲ್ಲಿ ಲಾಕ್ ಡೌನ್ ಮುಂದುವರಿಯಲಿದೆ ಎಂದು ಕೇರಳ ಸಿಎಂ ಪಿಣರಾಯಿ ವಿಜಯನ್ ಈಗಾಗಲೇ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳು ತೀವ್ರವಾಗಿ ಏರಿದ ಹಿನ್ನೆಲೆಯಲ್ಲಿ ಕೇರಳವು ಮೇ 8 ರಿಂದ ಲಾಕ್ ಡೌನ್ ಆಗಿದೆ.
ಕೇರಳದಲ್ಲಿ ಹೀಗಿದೆ ನಿರ್ಬಂಧ
- ಹೊಸ ಲಾಕ್‌ಡೌನ್ ಮಾರ್ಗಸೂಚಿಗಳ ಪ್ರಕಾರ, ಅಗತ್ಯ ಚಟುವಟಿಕೆಗಳನ್ನು ನಿರ್ವಹಿಸಲು ಕೆಲವು ರಿಯಾಯಿತಿಗಳನ್ನು ನೀಡಲಾಗಿದೆ. ಎಲ್ಲಾ ಕೈಗಾರಿಕಾ ಸಂಸ್ಥೆಗಳು ಕನಿಷ್ಠ ಉದ್ಯೋಗಿಗಳೊಂದಿಗೆ ಒಟ್ಟು ಶಕ್ತಿಯ ಶೇ 50 ಮೀರದಂತೆ ಕಾರ್ಯನಿರ್ವಹಿಸಬಹುದು.
- ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ 5 ರವರೆಗೆ ವಿಸ್ತೃತ ಸಮಯದೊಂದಿಗೆ ಬ್ಯಾಂಕ್ಗಳು ತೆರೆದಿರುತ್ತವೆ. ಪುಸ್ತಕ, ಮದುವೆಗಳಿಗೆ ಜವಳಿ, ಆಭರಣ ಮತ್ತು ಪಾದರಕ್ಷೆಗಳನ್ನು ಮಾರಾಟ ಮಾಡುವ ಅಂಗಡಿಗಳು ಸೋಮವಾರ, ಬುಧವಾರ ಮತ್ತು ಶುಕ್ರವಾರದಂದು ಸಂಜೆ 5 ಗಂಟೆಯವರೆಗೆ ತೆರೆದಿರುತ್ತವೆ.
ಕರ್ನಾಟಕದಲ್ಲಿ ಲಾಕ್‌ಡೌನ್ ವಿಸ್ತರಣೆ ಬಗ್ಗೆ ಸಿಎಂ ಹೇಳಿದ್ದು..
ಕರ್ನಾಟಕ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿನ್ನೆ ಮಾತನಾಡಿ, ಸಾರ್ವಜನಿಕರು ಸಹಕರಿಸಿದರೆ ಲಾಕ್‌ಡೌನ್ ವಿಸ್ತರಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಮತ್ತು ಕೊರೊನಾ ಪ್ರಕರಣಗಳಲ್ಲಿ ಇಳಿಕೆ ಕಂಡುಬಂದಿದೆ ಎಂದಿದ್ದಾರೆ.
ಮಹಾರಾಷ್ಟ್ರ ಇನ್ನೂ 15 ದಿನ ಲಾಕ್
ಏಪ್ರಿಲ್ 14 ರಿಂದ ಜಾರಿಗೆ ಬಂದ ಲಾಕ್‌ಡೌನ್ ರೀತಿಯ ನಿರ್ಬಂಧಗಳನ್ನು ಮಹಾರಾಷ್ಟ್ರ ಸರ್ಕಾರ ಇನ್ನೂ 15 ದಿನಗಳವರೆಗೆ ವಿಸ್ತರಿಸಿದೆ. ಅವು ಜೂನ್ 1 ರಂದು ಕೊನೆಗೊಳ್ಳಬೇಕಿತ್ತು.
ಗೋವಾದಲ್ಲೂ ಒಂದು ವಾರ ವಿಸ್ತರಣೆ
ಪ್ರಸ್ತುತ ಕೊರೊನಾ ಕರ್ಫ್ಯೂ ಅನ್ನು ಜೂನ್ 7 ರವರೆಗೆ ಇನ್ನೊಂದು ವಾರ ವಿಸ್ತರಿಸಲು ಗೋವಾ ಸರ್ಕಾರ ಶನಿವಾರ ನಿರ್ಧರಿಸಿದೆ.