ತಿರುವನಂತಪುರಂ(ಕೇರಳ):ಕಳೆದ ಕೆಲ ದಿನಗಳ ಹಿಂದೆ ತಮಿಳುನಾಡಿನ ನೀಲಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನದಲ್ಲಿ ಭಾರತೀಯ ಮೂರು ಸೇನೆಗಳ ಮುಖ್ಯಸ್ಥ ಬಿಪಿನ್ ರಾವತ್ ಅವರ ಧರ್ಮಪತ್ನಿ ಮಧುಲತಾ ಸೇರಿದಂತೆ 13 ಯೋಧರು ಹುತಾತ್ಮರಾಗಿದ್ದು, ಇಡೀ ದೇಶವೇ ಕಂಬನಿ ಮಿಡಿದಿದೆ. ಇದರ ಮಧ್ಯೆ ಕೆಲ ದೇಶದ್ರೋಹಿಗಳು ಇದರ ಸಂಭ್ರಮಾಚರಣೆ ಮಾಡಿರುವ ಘಟನೆ ಸಹ ನಡೆದಿದೆ.
ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಜನರಲ್ ಬಿಪಿನ್ ರಾವತ್ ಹುತಾತ್ಮರಾಗಿರುವ ಸುದ್ದಿ ಹೊರ ಬರುತ್ತಿದ್ದಂತೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಖುಷಿಯ ಎಮೋಜಿ ಬಳಕೆ ಮಾಡುವ ಮೂಲಕ ಕಮೆಂಟ್ ಮಾಡಿ ಸಂಭ್ರಮಿಸಿದ್ದರು.ಇದಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಕೇರಳದ ಖ್ಯಾತ ಚಿತ್ರ ನಿರ್ಮಾಪಕ ಅಲಿ ಅಕ್ಬರ್ ಇದೀಗ ಇದೇ ಕಾರಣದಿಂದಾಗಿ ತೀವ್ರ ಖಂಡನೆ ವ್ಯಕ್ತಪಡಿಸಿರುವ ಅವರು, ಇನ್ಮುಂದೆ ನಾನು ಮುಸ್ಲಿಂನಲ್ಲ ಭಾರತೀಯ ಎಂದು ಹೇಳಿದ್ದಾರೆ.
ಕಳೆದ ಕೆಲ ವರ್ಷಗಳಿಂದ ಬಿಜೆಪಿ ಬೆಂಬಲಿಗರಾಗಿರುವ ಅಲಿ ಅಕ್ಬರ್ ತಮ್ಮ ನಿರ್ಧಾರವನ್ನ ಫೇಸ್ಬುಕ್ ಲೈವ್ ಮೂಲಕ ಪ್ರಕಟಿಸಿದ್ದಾರೆ. ಇನ್ಮುಂದೆ ತಮ್ಮ ಕುಟುಂಬದೊಂದಿಗೆ ಭಾರತೀಯ ಸಂಸ್ಕೃತಿಯಲ್ಲಿ ಬದುಕುತ್ತೇವೆ ಎಂದು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ತುಣುಕು ಹರಿಬಿಟ್ಟಿರುವ ಅವರು, ಬಿಪಿನ್ ರಾವತ್ ಅವರ ಸಾವಿನ ಸಂಭ್ರಮಾಚರಣೆ ಮಾಡುವ ಜನರು ನಮ್ಮ ಮಧ್ಯೆ ಇದ್ದಾರೆ. ಇದೀಗ ನಾನು ಧರ್ಮದ ಮೇಲಿನ ನಂಬಿಕೆ ಕಳೆದುಕೊಂಡಿದ್ದೇನೆ ಮತ್ತು ಪತ್ನಿ ಲೂಸಿಯಮ್ಮರೊಂದಿಗೆ ಹಿಂದೂ ಧರ್ಮ ಸ್ವೀಕಾರ ಮಾಡುತ್ತೇನೆ ಎಂದು ಹೇಳಿಕೊಂಡಿದ್ದಾರೆ. ಅಲಿ ಅಕ್ಬರ್ ತಿಳಿಸಿರುವ ಪ್ರಕಾರ ಇನ್ಮುಂದೆ ಅವರು ರಾಮಸಿಂಹನ್ ಆಗಲು ನಿರ್ಧರಿಸಿದ್ದು, ಈ ಹೆಸರು ತಾವು ಖುದ್ದಾಗಿ ಆಯ್ಕೆ ಮಾಡಿದ್ದಾಗಿ ಹೇಳಿದ್ದಾರೆ. ಆದರೆ ತಮ್ಮಿಬ್ಬರು ಮಕ್ಕಳಿಗೆ ಮತಾಂತರ ಆಗುವ ವಿಷಯದಲ್ಲಿ ನಾವು ಯಾವುದೇ ರೀತಿಯಿಂದಲೂ ಒತ್ತಡ ಹಾಕುವುದಿಲ್ಲ ಎಂದೂ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿರಿ:ರಾವತ್ ನಿಧನ ಪ್ರತಿಯೊಬ್ಬ ದೇಶಭಕ್ತನಿಗೂ ನಷ್ಟ: ಕ್ಯಾ. ವರುಣ್ ಸಿಂಗ್ ಜೀವ ಉಳಿಸಲು ವೈದ್ಯರ ಸರ್ವ ಪ್ರಯತ್ನ: ನಮೋ
ಬಿಪಿನ್ ರಾವತ್ ಅವರ ಸಾವನ್ನ ಸಂಭ್ರಮಿಸಿರುವ ಸಂದರ್ಭದಲ್ಲಿ ಧಾರ್ಮಿಕ ಮುಖಂಡರು ಯಾವುದೇ ರೀತಿಯ ಪ್ರತಿಕ್ರಿಯೆ ನೀಡದಿರುವುದು ತಮಗೆ ಆಘಾತ ವ್ಯಕ್ತಪಡಿಸಿದೆ ಎಂದು ಅವರು ಹೇಳಿದ್ದಾರೆ. ರಾವತ್ ಅವರ ಸಾವನ್ನ ಸಂಭ್ರಮಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕರ್ನಾಟಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈಗಾಗಲೇ ತಿಳಿಸಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೂ ಸಹ ಸೂಚನೆ ನೀಡಿದ್ದಾರೆ.