ತಿರುವನಂತಪುರಂ: ನಕಲಿ ದಾಖಲೆಗಳನ್ನು ಬಳಸಿ ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್‌ನಲ್ಲಿ ಕೆಲಸ ಮಾಡುತ್ತಿದ್ದ ಅಫ್ಘಾನ್ ಪ್ರಜೆಯನ್ನು ಎರ್ನಾಕುಲಂ ದಕ್ಷಿಣ ವಿಭಾಗದ ಪೊಲೀಸರು ಬಂಧಿಸಿದ್ದಾರೆ. ಈತ ಕಳೆದ ಮೂರು ವರ್ಷಗಳಿಂದ ನಕಲಿ ದಾಖಲೆ ನೀಡಿ ಭಾರತದಲ್ಲೇ ಉಳಿದಿದ್ದ ಎನ್ನಲಾಗಿದೆ. ಆರೋಪಿಯನ್ನು ಕೋಲ್ಕತ್ತಾದಲ್ಲಿ ಬಂಧಿಸಿ ನಂತರ ಕೊಚ್ಚಿಗೆ ಕರೆತರಲಾಗಿದೆ.
ಅಫ್ಘಾನಿಸ್ತಾನ ಮೂಲದ ಅಬ್ಬಾಸ್ ಖಾನ್ ಅಲಿಯಾಸ್ ಇಡ್ಗುಲ್ ಬಂಧಿತ ಆರೋಪಿ. ಈತ ನೇಪಾಳ ಮೂಲಕ ಭಾರತಕ್ಕೆ ಪ್ರವೇಶಿಸಿ, ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ನಕಲಿ ದಾಖಲೆಗಳನ್ನು ನೀಡಿ ಕೆಲಸ ಪಡೆದಿದ್ದಾನೆ. ಇದು ಭದ್ರತಾ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಸ್ಸೋಂನಲ್ಲಿ ಉಳಿದುಕೊಂಡ ನಂತರ, ಶಾಲಾ ದಾಖಲಾತಿಗಳು ಸೇರಿದಂತೆ ನಕಲಿ ದಾಖಲೆಗಳನ್ನು ಬಳಸಿ ಕೊಚ್ಚಿಗೆ ಬಂದಿದ್ದ. ಈತನ ಸಂಬಂಧಿಕರು ಕೊಚ್ಚಿನ್ ಶಿಪ್‌ಯಾರ್ಡ್‌ನಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳ ವಿಚಾರಣೆ ನಡೆಯುತ್ತಿದೆ.
ಕೊಚ್ಚಿಯ ಪ್ರಮುಖ ಪ್ರದೇಶಗಳ ಮೇಲೆ ಅಪರಿಚಿತ ಡ್ರೋನ್ ಹಾರಾಟ ನಡೆಸಿದೆ ಎಂದು ಭದ್ರತಾ ಸಂಸ್ಥೆಗಳಿಗೆ ವರದಿಗಳು ಬಂದಿದ್ದವು. ಇದರ ಬೆನ್ನಲ್ಲೇ, ಈ ಪ್ರದೇಶದಲ್ಲಿ ಕಣ್ಗಾವಲು ಚುರುಕುಗೊಳಿಸಲಾಗಿತ್ತು. ಎಲ್ಲಾ ಆಯಾಮಗಳಲ್ಲಿ ಬಂಧಿತ ಇಡ್ಗುಲ್‌ನ ವಿಚಾರಣೆ ನಡೆಸಲಾಗುತ್ತಿದೆ.
ನೌಕಾಪಡೆಯ ದಕ್ಷಿಣ ಭಾರತದಲ್ಲಿನ ಮುಖ್ಯ ಕಚೇರಿ ಇಲ್ಲೇ ಇದೆ. ಕೊಚ್ಚಿನ್ ಶಿಪ್‌ಯಾರ್ಡ್ ಮತ್ತು ಕೊಚ್ಚಿನ್ ಪೋರ್ಟ್ ಟ್ರಸ್ಟ್‌ನ ಪ್ರಧಾನ ಕಚೇರಿ ಇಲ್ಲಿರುವುದರಿಂದ ಈ ಪ್ರದೇಶವು ಹೆಚ್ಚಿನ ಭದ್ರತೆಯ ವ್ಯಾಪ್ತಿಯಲ್ಲಿದೆ.