ತಿರುವನಂತಪುರಂ (ಕೇರಳ):ಚಿಕಿತ್ಸೆ ನೀಡುತ್ತಿದ್ದ ವೈದ್ಯೆಯನ್ನು ಸರ್ಜಿಕಲ್ ಬ್ಲೇಡ್ ಮತ್ತು ವೈದ್ಯಕೀಯ ಸಲಕರಣೆಗಳಿಂದ ಕೊಂದ ಕುಡುಕ ಆರೋಪಿಗೆ ಕೊಟ್ಟಾರಕ್ಕರ ಮ್ಯಾಜಿಸ್ಟ್ರೇಟ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ. ಆರೋಪಿಯನ್ನು ಪೂಜಾಪುರ ಜೈಲಿಗೆ ಸ್ಥಳಾಂತರಿಸಲಾಗಿದೆ.
ಪ್ರಕರಣವೇನು?:ಬುಧವಾರ ಕೊಲೆ ಆರೋಪಿ ಸಂದೀಪ್ ತನ್ನ ಮೇಲೆ ಹಲ್ಲೆಯಾಗಿದೆ, ರಕ್ಷಿಸಿ ಎಂದು ಪೊಲೀಸರಿಗೆ ಕರೆ ಮಾಡಿದ್ದ. ಪೊಲೀಸರು ಆತನನ್ನು ಮನೆಯಿಂದ ರಕ್ಷಣೆ ಮಾಡಿದ್ದರು. ಗಾಯಗೊಂಡ ಸ್ಥಿತಿಯಲ್ಲಿದ್ದ ಸಂದೀಪ್ನನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸಲಾಗುತ್ತಿತ್ತು. ಈ ವೇಳೆ ಆರೋಪಿ ಚಿಕಿತ್ಸೆ ನೀಡುತ್ತಿದ್ದ 22 ವರ್ಷದ ವೈದ್ಯೆ ವಂದನಾ ದಾಸ್ ಅವರ ಮೇಲೆ ಏಕಾಏಕಿ ದಾಳಿ ಮಾಡಿದ್ದ.
ಚಿಕಿತ್ಸೆಗೆಂದು ಬಳಸಲು ಇಟ್ಟಿದ್ದ ಸರ್ಜಿಕಲ್ ಬ್ಲೇಡ್ನಿಂದ ವೈದ್ಯೆಯ ಕತ್ತಿಗೆ ಇರಿದಿದ್ದ. ಎದೆಭಾಗಕ್ಕೂ ಚಾಕುವಿನಿಂದ ಚುಚ್ಚಿದ್ದ. ವೈದ್ಯೆ ಅಲ್ಲಿಂದ ಹೊರಗೋಡಿ ಬಂದರೂ ಬಿಡದ ಕಿರಾತಕ ದಾಳಿ ಮಾಡಿದ್ದ. ಬಿಡಿಸಲು ಬಂದ ನಾಲ್ವರ ಮೇಲೂ ಚಾಕುವಿನಿಂದ ಗಾಯಗೊಳಿಸಿದ್ದಾನೆ. ಪೊಲೀಸರು ಹರಸಾಹಸಪಟ್ಟು ಆತನನ್ನು ಬಂಧಿಸಿದ್ದರು.
ತೀವ್ರವಾಗಿ ಗಾಯಗೊಂಡಿದ್ದ ವೈದ್ಯೆ ವಂದನಾರನ್ನು ತುರ್ತು ಚಿಕಿತ್ಸೆ ನೀಡಿ, ಬಳಿಕ ಬೇರೊಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ತಸ್ರಾವದಿಂದ ಆಕೆ ಮೃತಪಟ್ಟಿದ್ದಳು. ಮೃತ ವೈದ್ಯ ವಂದನಾ ಅವರು ಕೊಲ್ಲಂನ ಅಜೀಜಿಯಾ ವೈದ್ಯಕೀಯ ಕಾಲೇಜಿನಲ್ಲಿ ಹೌಸ್ ಸರ್ಜನ್ ಆಗಿ ಕೆಲಸ ಮಾಡುತ್ತಿದ್ದರು. ಕೊಲ್ಲಂ ಜಿಲ್ಲೆಯ ಕಡುಂತುರಿಟಿ ನಿವಾಸಿಗಳಾದ ಮೋಹನ್‌ದಾಸ್ ಮತ್ತು ವಸಂತ ಕುಮಾರಿ ದಂಪತಿಯ ಏಕೈಕ ಪುತ್ರಿಯಾಗಿದ್ದರು.