ಕೊಚ್ಚಿ :ಮಾನ್ಸನ್ ಮಾವುಂಕಲ್ ಪ್ರಾಚ್ಯವಸ್ತು ಹಗರಣಕ್ಕೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಐಜಿ ಗುಗುಲೋತ್ ಲಕ್ಷ್ಮಣ್ ಅವರನ್ನು ಕೇರಳ ಅಪರಾಧ ವಿಭಾಗ ಬಂಧಿಸಿದೆ. ಕ್ರೈಂ ಬ್ರಾಂಚ್ ವಿಚಾರಣೆ ವೇಳೆ ಸೂಕ್ತ ಉತ್ತರ ನೀಡಲು ವಿಫಲರಾದ ಕಾರಣ ಐಜಿ ಲಕ್ಷ್ಮಣ್ರನ್ನು ಬಂಧಿಸಲಾಗಿದ್ದು, ಅಧಿಕಾರಿಗಳಿಗೆ ಫೋನ್ ದಾಖಲೆಗಳು ಸೇರಿದಂತೆ ಬಲವಾದ ಡಿಜಿಟಲ್ ಸಾಕ್ಷ್ಯಗಳು ಲಭಿಸಿವೆ ಎಂದು ತಿಳಿದುಬಂದಿದೆ.
ಅಪರಾಧ ವಿಭಾಗದ ಸೂಚನೆಯಂತೆ ಐಜಿ ಲಕ್ಷ್ಮಣ್ ನಿನ್ನೆ ಬೆಳಗ್ಗೆ 11.30 ರ ಸುಮಾರಿಗೆ ಕಲಮಶ್ಶೇರಿ ಅಪರಾಧ ವಿಭಾಗದ ಕಚೇರಿಗೆ ವಿಚಾರಣೆಗೆಂದು ಆಗಮಿಸಿದ್ದರು. ಇದೇ ಮೊದಲ ಬಾರಿಗೆ ತನಿಖಾ ತಂಡದ ಮುಂದೆ ಹಾಜರಾಗಿದ್ದ ಆರೋಪಿ ಐಜಿ ಲಕ್ಷ್ಮಣ್ಗೆ ಈ ಹಿಂದೆ ಮಧ್ಯಂತರ ಜಾಮೀನು ಮಂಜೂರು ಮಾಡುವಾಗ ಕೇರಳ ಹೈಕೋರ್ಟ್ ತನಿಖೆಗೆ ಸಹಕರಿಸುವಂತೆ ಸೂಚನೆ ನೀಡಿತ್ತು. ಆದರೆ, ಎರಡು ಬಾರಿ ನೋಟಿಸ್ ಮೂಲಕ ಸಮನ್ಸ್ ನೀಡಿದರೂ ಲಕ್ಷ್ಮಣ್ ವಿಚಾರಣೆಗೆ ಹಾಜರಾಗಿರಲಿಲ್ಲ. ಇದರ ಬೆನ್ನಲ್ಲೇ, ತನಿಖಾ ತಂಡವು ಲಕ್ಷ್ಮಣ್ ವಿರುದ್ಧ ನ್ಯಾಯಾಲಯಕ್ಕೆ ವರದಿ ಸಲ್ಲಿಸಿತ್ತು.
ಅಪರಾಧ ವಿಭಾಗದ ಪೊಲೀಸರು ಹೈಕೋರ್ಟ್‌ಗೆ ಸಲ್ಲಿಸಿದ ವರದಿಯಲ್ಲಿ, "ಪುರಾತನ ವಸ್ತುಗಳು (ಪ್ರಾಚ್ಯವಸ್ತು) ವಂಚನೆಗೆ ಸಂಬಂಧಿಸಿದ ಪ್ರಕರಣದ ಮಾಸ್ಟರ್ ಮೈಂಡ್ ಐಜಿ ಲಕ್ಷ್ಮಣ್ ಎಂದು ಅಪರಾಧ ವಿಭಾಗ ಹೇಳಿದೆ. ಅಷ್ಟೇ ಅಲ್ಲದೆ, ಕ್ರೈಂ ಬ್ರಾಂಚ್ ಐಜಿ ಲಕ್ಷ್ಮಣ್ ವಿರುದ್ಧ ಪಿತೂರಿ ಆರೋಪ ಸಹ ಹೊರಿಸಿತ್ತು. ಸದ್ಯಕ್ಕೆ ನಡೆಯುತ್ತಿರುವ ತನಿಖೆಯಲ್ಲಿ ಆರೋಪಿ ವಿರುದ್ಧ ಮಹತ್ವದ ಸಾಕ್ಷ್ಯಗಳು ಲಭ್ಯವಾಗಿದೆ ಎಂದು ಕ್ರೈಂ ಬ್ರಾಂಚ್ ನ್ಯಾಯಾಲಯಕ್ಕೆ ಮಾಹಿತಿ ನೀಡಿದೆ. ಹೀಗಿದ್ದರೂ, ಐಜಿ ಲಕ್ಷ್ಮಣ್ ತನಿಖೆಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದ್ದು, ಬಂಧನದ ಭೀತಿಯಿಂದ ವಿಚಾರಣೆಗೆ ಹಾಜರಾಗಿಲ್ಲ" ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಿದ್ದರು. ಜೊತೆಗೆ, ಕ್ರೈಂ ಬ್ರಾಂಚ್ ಅಧಿಕಾರಿಗಳು ಐಜಿ ಲಕ್ಷ್ಮಣ್ ಜೊತೆಗೆ ಇರುವ ಮಾನ್ಸನ್ ಮಾವುಂಕಲ್ನ ಹಲವು ಫೋಟೋಗಳನ್ನು ಪಡೆದುಕೊಂಡಿದ್ದರು. ಮಾನ್ಸನ್ ಜತೆ ಐಜಿ ಮಾಡಿರುವ ದೂರವಾಣಿ ಕರೆಗಳು ಹಾಗೂ ಟವರ್ ಲೊಕೇಶನ್ ಮಾಹಿತಿಯನ್ನು ಸಹ ತನಿಖಾ ತಂಡ ಸಂಗ್ರಹಿಸಿದೆ.