ತಿರುವನಂತಪುರಂ (ಕೇರಳ): 2002ರಲ್ಲಿ ನಡೆದ ಗೋಧ್ರೋತ್ತರ ಗಲಭೆಯ ಕುರಿತಾದ ಬಿಬಿಸಿ ಸಾಕ್ಷ್ಯಚಿತ್ರಕ್ಕೆ ಭಾರತದಾದ್ಯಂತ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಭಾರತದಲ್ಲಿ ಈ ಸಾಕ್ಷ್ಯ ಚಿತ್ರವನ್ನು ನಿಷೇಧಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದೀಗ ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ) ಗುರುವಾರ ವಿವಾದಾತ್ಮಕ ಸಾಕ್ಷ್ಯ ಚಿತ್ರವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದೆ.
ಈ ಹಿಂದೆ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಆದೇಶವನ್ನು ಧಿಕ್ಕರಿಸಿ ಇಂಡಿಯಾ:ದಿ ಮೋದಿ ಕ್ವೆಶ್ಚನ್ ಸಾಕ್ಷ್ಯ ಚಿತ್ರವನ್ನು ಪ್ರದರ್ಶಿಸಲಾಗುವುದು ಎಂದು ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಮತ್ತು ಯುವ ಘಟಕ ಹಾಗು ಡಿವೈಎಫ್ಐ ಹೇಳಿತ್ತು. ಇದಾದ ಬಳಿಕ ಶಂಘು ಮುಗಂ ಬೀಚ್ನಲ್ಲಿ ವಿವಾದಿತ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದೆ. "ಗುಜರಾತ್ ಹಿಂಸಾಚಾರ ಕುರಿತಾದ ಸಾಕ್ಷ್ಯ ಚಿತ್ರವನ್ನು ಮೊದಲು ನಮ್ಮ ಕೆಪಿಸಿಸಿ ಪ್ರಧಾನ ಕಚೇರಿಯಲ್ಲಿ ಇಲ್ಲಿನ ಸಿಬ್ಬಂದಿ ಮತ್ತು ಪಕ್ಷದ ಕಾರ್ಯಕರ್ತರಿಗೆ ಪ್ರದರ್ಶಿಸಲಾಯಿತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯಿತು. ಹೀಗಾಗಿ ನಾವು ಸಾರ್ವಜನಿಕವಾಗಿ ಪ್ರದರ್ಶನ ಏರ್ಪಡಿಸಿದೆವು. ಇದಕ್ಕೂ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇನ್ನು ಮುಂದಕ್ಕೂ ರಾಜ್ಯಾದ್ಯಂತ ಈ ಸಾಕ್ಷ್ಯ ಚಿತ್ರವನ್ನು ಪ್ರದರ್ಶನ ಮಾಡುತ್ತೇವೆ" ಎಂದು ಕೆಪಿಸಿಸಿ ಜನರಲ್ ಸೆಕ್ರೆಟರಿ ಜಿ.ಎಸ್.ಬಾಬು ಹೇಳಿದರು.
"ವಿವಾದಿತ ಸಾಕ್ಷ್ಯ ಚಿತ್ರದ ಮೊದಲ ಕಂತಿನ ಪರಿಚಯ ಭಾಗ ಮತ್ತು 2ನೇ ಭಾಗವನ್ನು ಸಾರ್ವಜನಿಕವಾಗಿ ಪ್ರದರ್ಶಿಸಲಾಗಿದೆ. ಸಾಕ್ಷ್ಯ ಚಿತ್ರದಲ್ಲೇನಿದೆ ಎಂದು ತಿಳಿಯಲು ಜನರು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷವು ಕೆಲವು ಕಡೆಗಳಲ್ಲಿ ಸಾಕ್ಷ್ಯಚಿತ್ರದ ಪ್ರಥಮ ಭಾಗವನ್ನು ಪ್ರದರ್ಶನ ಮಾಡಲು ಸಿದ್ಧತೆ ನಡೆಸಿದೆ" ಎಂದು ಅವರು ತಿಳಿಸಿದರು.