ಕಣ್ಣೂರು (ಕೇರಳ): ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಹೊಗಳಿದ ಕೇಂದ್ರದ ಮಾಜಿ ಸಚಿವ ಕೆ.ವಿ.ಥಾಮಸ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕೇರಳ ಕಾಂಗ್ರೆಸ್ ಅಧ್ಯಕ್ಷ ಕೆ.ಸುಧಾಕರನ್ ಪಕ್ಷದ ಹೈಕಮಾಂಡ್‌ಗೆ ಒತ್ತಾಯಿಸಿದ್ದಾರೆ. ಕೇರಳದ ಕಣ್ಣೂರಿನಲ್ಲಿ ಸಿಪಿಐ(ಎಂ) ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಶನಿವಾರ ಭಾಗವಹಿಸಿದ್ದ ಥಾಮಸ್ ರಾಜ್ಯದಲ್ಲಿ ಪ್ರಮುಖ ಮೂಲಸೌಕರ್ಯ ಯೋಜನೆಗಳನ್ನು ಪೂರ್ಣಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿಯನ್ನು ಶ್ಲಾಘಿಸಿದ್ದರು.
ವಿಚಾರ ಸಂಕಿರಣದಲ್ಲಿ ಮಾತನಾಡಿದ ಥಾಮಸ್, ವಿಜಯನ್ ಅವರನ್ನು ಶ್ಲಾಘಿಸಿ, ಪಿಣರಾಯಿ ವಿಜಯನ್ ಅವರು ದೇಶದ ಉತ್ತಮ ಮುಖ್ಯಮಂತ್ರಿಗಳಲ್ಲಿ ಒಬ್ಬರು, ಕೇರಳದ ಮುಖ್ಯಮಂತ್ರಿಯಾಗಿ ಪಿಣರಾಯಿ ವಿಜಯನ್ ಅವರ ಬಗ್ಗೆ ನನಗೆ ಹೆಮ್ಮೆ ಇದೆ. ಅವರ ಇಚ್ಛಾಶಕ್ತಿಯಿಂದಾಗಿ ಕೇರಳದಲ್ಲಿ ಗೇಲ್ ಪೈಪ್‌ಲೈನ್ ಪೂರ್ಣಗೊಂಡಿದೆ ಎಂದು ಥಾಮಸ್ ಹೇಳಿದ್ದರು.
ಮಾಜಿ ಕೇಂದ್ರ ಸಚಿವರ ಪ್ರಸಂಶೆಯ ಮಾತುಗಳಿಂದ ಕೋಪಗೊಂಡ ಸುಧಾಕರನ್, ಥಾಮಸ್ ಅವರು ರಾಜ್ಯದ ಮುಖ್ಯಮಂತ್ರಿಯೊಂದಿಗೆ ಕೈಜೋಡಿಸಿದ್ದಾರೆ ಎಂದು ಆರೋಪಿಸಿದ್ದರು. ಥಾಮಸ್ ಪಕ್ಷದಿಂದ ದೂರ ಸರಿಯುತ್ತಿದ್ದಾರೆ. ಈಗ ಏನು ಬೇಕಾದರೂ ಮಾತನಾಡಬಹುದು. ಥಾಮಸ್ ಅವರ ವಿರುದ್ಧ ಕ್ರಮಕೈಗೊಳ್ಳುವಂತೆ ಕಾಂಗ್ರೆಸ್ ರಾಜ್ಯ ಘಟಕದ ಹೈಕಮಾಂಡ್‌ಗೆ ಪತ್ರ ಬರೆದಿದ್ದೇನೆ. ಅವರು ಎಐಸಿಸಿ ಸದಸ್ಯರಾಗಿರುವ ಕಾರಣ ಪಕ್ಷ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸುಧಾಕರನ್ ಹೇಳಿದ್ದಾರೆ.
ಥಾಮಸ್ ಅವರು ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದಾಗ, ಕೇಂದ್ರ ಸಚಿವರಾಗಿದ್ದಾಗಲೂ ವಿಜಯನ್ ಅವರಲ್ಲಿ ಒಳ್ಳೆತನ ಕಾಣಿಸಿರಲಿಲ್ಲ. ಆಗ ಕಾಣಿಸದ ಹಿರಿಮೆ ಈಗ ಮಾತ್ರ ಕಾಣಿಸುತ್ತಿದೆ. ಥಾಮಸ್ ಅವರು ಸೆಮಿನಾರ್ನಲ್ಲಿ ಭಾಗವಹಿಸಲು ಉದ್ದೇಶಪೂರ್ವಕವಾಗಿಯೇ ಅನುಮತಿ ನೀಡಲು ನಿರಾಕರಿಸಿತ್ತು. ಆದರೆ, ಥಾಮಸ್ ಅವರು ಸೆಮಿನಾರ್ನಲ್ಲಿ ಭಾಗವಹಿಸಿವುದಕ್ಕಾಗಿಯೇ ಪಕ್ಷವನ್ನು ನಿರಾಕರಿಸಿದ್ದಾರೆ. ಸಿಪಿಐ(ಎಂ) ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಎಂ.ವಿ.ಜಯರಹಾನ್ ಮತ್ತು ಪಕ್ಷದ ಕಾರ್ಯಕರ್ತರು ಶುಕ್ರವಾರ ರಾತ್ರಿ ಅವರನ್ನು ವಿಮಾನ ನಿಲ್ದಾಣದಲ್ಲಿ ಬರಮಾಡಿಕೊಂಡಿದ್ದಾರೆ ಎಂದು ಸುಧಾಕರನ್ ಹೇಳಿದರು.
ಈ ವಿಚಾರ ಸಂಕಿರಣದಲ್ಲಿ ನಾನು ಭಾಗವಹಿಸುವುದರಿಂದ ಕಾಂಗ್ರೆಸ್‌ಗೆ ಲಾಭವಿದೆ ಎಂಬುದನ್ನು ನನ್ನ ಸಹೋದ್ಯೋಗಿಗಳು ಅರ್ಥ ಮಾಡಿಕೊಳ್ಳುತ್ತಾರೆ ಎಂದು ನಂಬಿದ್ದೇನೆ. ರಾಹುಲ್ ಗಾಂಧಿ ಅವರ ನಾಯಕತ್ವವನ್ನು ಒಪ್ಪಿಕೊಂಡರೆ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕು ಎಂದು ಪಕ್ಷದ ಕಾರ್ಯಕರ್ತರಿಗೆ ಹೇಳಲು ಬಯಸುತ್ತೇನೆ ಎಂದು ಥಾಮಸ್ ತಿಳಿಸಿದರು. ಏಪ್ರಿಲ್ 6ರಿಂದ ಏಪ್ರಿಲ್ 10ರವರೆಗೆ ಕೇರಳದ ಕಣ್ಣೂರಿನಲ್ಲಿ ಸಿಪಿಐ (ಎಂ) ಆಯೋಜಿಸಿದ್ದ ಸೆಮಿನಾರ್ನಲ್ಲಿ ಥಾಮಸ್ ಅವರನ್ನು ಶನಿವಾರ 'ಕೇಂದ್ರ-ರಾಜ್ಯ ಸಂಬಂಧಗಳು' ವಿಷಯದ ಕುರಿತು ಮಾತನಾಡಲು ಆಹ್ವಾನಿಸಲಾಗಿತ್ತು.