ಕೋಯಿಕ್ಕೋಡ್ (ಕೇರಳ) : ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ 'ಧೋತಿ ಧರಿಸಿರುವ ಮೋದಿ' ಎಂದು ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿಡಿ ಸತೀಶನ್ ವಾಗ್ದಾಳಿ ನಡೆಸಿದ್ದಾರೆ. ಏಷಿಯಾನೆಟ್ ನ್ಯೂಸ್ ಸುದ್ದಿವಾಹಿನಿಯ ಕಚೇರಿಯ ಮೇಲೆ ಕ್ರೈಂ ಬ್ರಾಂಚ್ ಪೊಲೀಸರ ತಂಡ ದಾಳಿ ನಡೆಸಿದ್ದನ್ನು ಖಂಡಿಸಿರುವ ಸತೀಶನ್ ಸಿಎಂ ಪಿಣರಾಯಿ ವಿರುದ್ಧ ಕಿಡಿ ಕಾರಿದ್ದಾರೆ. ಶಾಸಕ ಪಿವಿ ಅನ್ವರ್ ನೀಡಿದ ದೂರಿನ ಆಧಾರದ ಮೇಲೆ ಮಲಯಾಳಂನ ಪ್ರಮುಖ ಸುದ್ದಿವಾಹಿನಿ ಏಷಿಯಾನೆಟ್ ನ್ಯೂಸ್ ಕಚೇರಿ ಮೇಲೆ ದಾಳಿ ನಡೆಸಲಾಗಿದೆ.
ಕೇರಳ ಮುಖ್ಯಮಂತ್ರಿ ತಾವು ಧೋತಿ ಉಟ್ಟಿರುವ ಮೋದಿ ಎಂಬುದನ್ನು ಸಾಬೀತುಪಡಿಸುತ್ತಿದ್ದಾರೆ. ಮೋದಿ ಬಿಬಿಸಿ ಕಚೇರಿಯ ಮೇಲೆ ಮಾಡಿದ್ದನ್ನು ಇಲ್ಲಿ ಏಷ್ಯಾನೆಟ್ ನ್ಯೂಸ್ ಕಚೇರಿಯ ಮೇಲೆ ಸಿಎಂ ಮಾಡಿದ್ದಾರೆ. ಇದು ಅಸಹಿಷ್ಣುತೆಯ ಸ್ಪಷ್ಟ ಸಂಕೇತವಾಗಿದೆ. ಇಬ್ಬರೂ (ಸಿಎಂ ಮತ್ತು ಪಿಎಂ) ತಮ್ಮ ಟೀಕಾಕಾರರನ್ನು ಹೆದರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಸತೀಶನ್ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡುತ್ತಾ ಹೇಳಿದರು.
ವಿಶೇಷವೆಂದರೆ, ಏಷ್ಯಾನೆಟ್ ನವೆಂಬರ್ 10 ರಂದು 'ಮಾದಕ ವಸ್ತು ಒಂದು ಕೊಳಕು ವ್ಯವಹಾರ' (Narcotics is a dirty business) ಎಂಬ ಶೀರ್ಷಿಕೆಯ ವರದಿಯನ್ನು ಪ್ರಸಾರ ಮಾಡಿತ್ತು. ಈ ವರದಿಯು ಕಪೋಲಕಲ್ಪಿತ ಮತ್ತು ಆಧಾರರಹಿತ ಎಂದು ಶಾಸಕರು ಆರೋಪಿಸಿ ಡಿಜಿಪಿಗೆ ಲಿಖಿತ ದೂರು ಸಲ್ಲಿಸಿದ್ದಾರೆ. ಇದರ ಆಧಾರದ ಮೇಲೆ ಪೊಲೀಸರು ಏಷಿಯಾನೆಟ್ ನ ನಾಲ್ವರನ್ನು ಆರೋಪಿಗಳನ್ನಾಗಿ ಮಾಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೋಕ್ಸೊ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿ ಪ್ರಕರಣ ದಾಖಲಿಸಲಾಗಿದೆ. ಇದರ ಮುಂದುವರಿದ ಭಾಗವಾಗಿ ಅಪರಾಧ ವಿಭಾಗದ ಸಹಾಯಕ ಕಮಿಷನರ್ ವಿ. ಸುರೇಶ್ ಮತ್ತು ಏಳು ಮಂದಿ ಪೊಲೀಸರ ತಂಡ ಇಂದು ಕಚೇರಿ ಮೇಲೆ ದಾಳಿ ನಡೆಸಿದೆ. ಎರಡು ದಿನಗಳ ಹಿಂದೆ ಎಸ್‌ಎಫ್‌ಐ ಕಾರ್ಯಕರ್ತರು ಕೊಚ್ಚಿಯಲ್ಲಿರುವ ಏಷ್ಯಾನೆಟ್ ಕಚೇರಿಗೆ ನುಗ್ಗಿದ್ದರು.