ತಿರುವನಂತಪುರಂ: ಕೇರಳದಲ್ಲಿ ಸಿಬಿಐ ಯಾವುದಾದರೂ ಪ್ರಕರಣದ ತನಿಖೆ ನಡೆಸಬೇಕಾದರೆ ಅದಕ್ಕೆ ರಾಜ್ಯ ಸರ್ಕಾರದ ಅನುಮತಿ ಪಡೆದುಕೊಳ್ಳಬೇಕಾಗಿದ್ದು, ಇಂತಹದೊಂದು ನಿರ್ಧಾರವನ್ನ ಅಲ್ಲಿನ ಸರ್ಕಾರ ತೆಗೆದುಕೊಂಡಿದೆ.
ಕೇರಳ ಸಿಎಂ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ನಡೆದ ಕ್ಯಾಬಿನೆಟ್ ಸಭೆಯಲ್ಲಿ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದ್ದು, ಕೇರಳದಲ್ಲಿ ಇನ್ಮುಂದೆ ಯಾವುದೇ ಪ್ರಕರಣದ ತನಿಖೆ ನಡೆಸಬೇಕಾದರೆ ಅದಕ್ಕೆ ಅಲ್ಲಿನ ಗೃಹ ಇಲಾಖೆ ಅನುಮತಿ ಕಡ್ಡಾಯವಾಗಿರುತ್ತದೆ.
ಈಗಾಗಲೇ ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ಗಢಗಳಲ್ಲಿ ಈ ನಿಯಮ ಜಾರಿಯಲ್ಲಿದ್ದು, ಇದೀಗ ಕೇರಳದಲ್ಲೂ ಈ ನಿಯಮ ಜಾರಿಯಾಗಲಿದೆ. ಸಿಬಿಐ ತನಿಖೆಗೆ ನೀಡಲಾಗಿದ್ದ ಸಾಮಾನ್ಯ ಒಪ್ಪಿಗೆ ಇದೀಗ ಕೇರಳ ಸರ್ಕಾರ ಹಿಂಪಡೆದುಕೊಂಡಿರುವ ಕಾರಣ ಸಿಬಿಐ ರಾಜ್ಯದಲ್ಲಿ ತನಿಖೆ ನಡೆಸುವುದಕ್ಕೆ ರಾಜ್ಯದ ಅನುಮತಿ ಕಡ್ಡಾಯವಾಗಿದೆ.
ಕೇರಳದಲ್ಲಿನ ಲೈಫ್ ಮಿಷನ್ ವಸತಿ ಯೋಜನೆಯಲ್ಲಿ ಸಿಬಿಐ ಹಸ್ತಕ್ಷೇಪ ಮಾಡಿದ್ದರಿಂದ ಅಲ್ಲಿನ ಸರ್ಕಾರ ಆಕ್ರೋಶಗೊಂಡಿದೆ ಎಂದು ಹೇಳಲಾಗುತ್ತಿದ್ದು, ಅದೇ ಕಾರಣಕ್ಕಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ.