ಕೊಚ್ಚಿ (ಕೇರಳ):ಕೇರಳದ ಕೊಚ್ಚಿ ಜಿಲ್ಲೆಯ ಕಲಮಸ್ಸೆರಿಯಲ್ಲಿ ಇಂದು ಬೆಳಗ್ಗೆ ಕ್ರಿಶ್ಚಿಯನ್ ಧಾರ್ಮಿಕ ಸಭೆಯಲ್ಲಿ ನಡೆದ ಸರಣಿ ಸ್ಫೋಟಗಳ ಹೊಣೆ ಹೊತ್ತು ವ್ಯಕ್ತಿಯೊಬ್ಬ ಪೊಲೀಸರಿಗೆ ಶರಣಾಗಿದ್ದಾನೆ. ತನ್ನನ್ನು ಡೊಮಿನಿಕ್ ಮಾರ್ಟಿನ್ ಎಂದು ಹೇಳಿಕೊಂಡಿರುವ ಈ ವ್ಯಕ್ತಿ ತ್ರಿಶೂರ್ ಜಿಲ್ಲೆಯ ಪೊಲೀಸರ ಮುಂದೆ ಹಾಜರಾಗಿದ್ದಾನೆ.
ಪ್ರಾರ್ಥನಾ ಸಭೆಯಲ್ಲಿ ನಡೆದ ಸರಣಿ ಸ್ಫೋಟಗಳಲ್ಲಿ ಓರ್ವ ಮಹಿಳೆ ಮೃತಪಟ್ಟಿದ್ದಾರೆ. ಅಲ್ಲದೇ, 45 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಸಾಕಷ್ಟು ಆತಂಕಕ್ಕೆ ಕಾರಣವಾಗಿದೆ. ಇದರ ಬೆನ್ನಲ್ಲೇ, ಡೊಮಿನಿಕ್ ಮಾರ್ಟಿನ್ ಸ್ಫೋಟಗಳ ಹೊಣೆ ಹೊತ್ತಿದ್ದಾನೆ. ತಾನು Jehovah's Witnesses ಪಂಗಡದ ಸದಸ್ಯ ಎಂದೂ ಹೇಳಿಕೊಂಡಿರುವ ಈತ, ಪೊಲೀಸರಿಗೆ ಶರಣಾಗುವ ಮೊದಲು ಫೇಸ್‌ಬುಕ್‌ನಲ್ಲಿ ವಿಡಿಯೋವೊಂದನ್ನೂ ಈ ಪೋಸ್ಟ್ ಮಾಡಿದ್ದಾನೆ. Jehovah's Witnesses ಗುಂಪು ಅಮೆರಿಕದಲ್ಲಿ 19ನೇ ಶತಮಾನದಲ್ಲಿ ಹುಟ್ಟಿಕೊಂಡಿತ್ತು.
ಮಲಯಾಳಂ ಮತ್ತು ಹಿಂದಿ ಭಾಷೆಯಲ್ಲಿರುವ ಈ ವಿಡಿಯೋ ಸಂದೇಶದಲ್ಲಿ ತನ್ನ ನಡೆಯನ್ನು ಸಮರ್ಥಿಸಿಕೊಂಡಿದ್ದಾನೆ. Jehovah's Witnesses ಪಂಗಡದವರನ್ನು "ಮಕ್ಕಳಲ್ಲಿ ದ್ವೇಷವನ್ನು ಹರಡುವ ದ್ರೋಹಿಗಳು. ಎಲ್ಲಾ ಮಾನವರಿಗೆ ಆಪತ್ತನ್ನು ಬಯಸುತ್ತಾರೆ'' ಎಂದು ಆರೋಪಿಸಿರುವ ಈತ, ''ನಾನು 16 ವರ್ಷಗಳ ಕಾಲ ಭಕ್ತರೊಂದಿಗೆ ಇದ್ದೆ. ತಮ್ಮನ್ನು ತಾವು ಸರಿಪಡಿಸಿಕೊಳ್ಳುವಂತೆ ಒತ್ತಾಯಿಸಿದ್ದೆ. ಆದರೆ ಅವರು ನಿರಾಕರಿಸಿದರು. ಯೆಹೋವ ಪ್ರಜಾಪ್ರಭುತ್ವ ಮತ್ತು ಪ್ರಜಾಸತ್ತಾತ್ಮಕ ವ್ಯವಸ್ಥೆಗಳಿಗೆ ವಿರುದ್ಧವಾಗಿವಾಗಿದೆ'' ಎಂದು ಹೇಳಿದ್ದಾನೆ.
ತ್ರಿಶೂರ್ ಜಿಲ್ಲೆಯ ಕೊಡಕರ ಪೊಲೀಸ್ ಠಾಣೆಗೆ ಮಧ್ಯಾಹ್ನ 1:30 ರ ಸುಮಾರಿಗೆ ಡೊಮಿನಿಕ್ ಮಾರ್ಟಿನ್ ಶರಣಾಗಿದ್ದಾನೆ. ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದಾನೆ. ಆತನನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಪ್ರಾಥಮಿಕ ವಿಚಾರಣೆಯಲ್ಲಿ ವ್ಯತಿರಿಕ್ತ ಹೇಳಿಕೆ ನೀಡಿದ್ದಾನೆ. ಹೀಗಾಗಿ ಹೆಚ್ಚಿನ ವಿಚಾರಣೆ ನಡೆಸಲು ಪೊಲೀಸರು ನಿರ್ಧರಿಸಿದ್ದಾರೆ. ಎಡಿಜಿಪಿ ನೇತೃತ್ವದಲ್ಲಿ ಉನ್ನತ ಮಟ್ಟದ ಅಧಿಕಾರಿಗಳು ಕೂಡ ಶೀಘ್ರವೇ ಕೊಡಕರ ಠಾಣೆಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ.