ಕೊಚ್ಚಿ (ಕೇರಳ): ಕೊಚ್ಚಿಯ ಕಲಮಶ್ಶೇರಿ ಎಂಬಲ್ಲಿ ಭಾನುವಾರ ಬೆಳಿಗ್ಗೆ ಯೆಹೋವನ ಪ್ರಾರ್ಥನಾ ಸಭೆ ವೇಳೆ ಸಂಭವಿಸಿದ ಭೀಕರ ಸ್ಪೋಟದಲ್ಲಿ ಮೃತಪಟ್ಟವರ ಸಂಖ್ಯೆ 3ಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ ಒಟ್ಟು 52 ಮಂದಿ ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದ ಮಲಯತ್ತೂರು ನಿವಾಸಿ ಲಿಬಿನಾ (12) ಎಂಬ ಬಾಲಕಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಳೆ.
ಶೇ. 95ರಷ್ಟು ಸುಟ್ಟಗಾಯಗಳಿಂದ ಬಳಲುತ್ತಿದ್ದ ಲಿಬಿನಾಗೆ ಕಲಮಸ್ಸೇರಿ ವೈದ್ಯಕೀಯ ಕಾಲೇಜಿನ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಘಟನೆ ಸಂಭವಿಸಿದ ತಕ್ಷಣ ಬಾಲಕಿಯನ್ನು ಇಲ್ಲಿನ ವೈದ್ಯಕೀಯ ಕಾಲೇಜಿಗೆ ಕರೆತರಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಬಾಲಕಿ ರಾತ್ರಿ 12.40ಕ್ಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.
ಕಳೆದ ದಿನ ಕರುಪ್ಪಂಪಾಡಿ ನಿವಾಸಿ ಲಿಯೋನಾ ಎಂಬವರು ಸ್ಪೋಟ ನಡೆದ ಸ್ಥಳದಲ್ಲೇ ಸಾವನ್ನಪ್ಪಿದ್ದರು. ಬಳಿಕ ತೊಡಪುಳ ನಿವಾಸಿ ಮೀನಾ ಕುಮಾರಿ ಎಂಬವರು ನಿನ್ನೆ( ಭಾನುವಾರ) ಸಂಜೆ ಕಲಮಶ್ಶೇರಿಯ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು. ಈ ಮೂಲಕ ಮೃತಪಟ್ಟವರ ಸಂಖ್ಯೆ ಮೂರಕ್ಕೆ ಏರಿಕೆ ಆಗಿದೆ. ಘಟನೆಯಲ್ಲಿ ಒಟ್ಟು 52 ಮಂದಿ ಗಾಯಗೊಂಡಿದ್ದು, 16 ಜನರ ಸ್ಥಿತಿ ಗಂಭೀರವಾಗಿದೆ. ಇದರಲ್ಲಿ 8 ಮಂದಿ ಕಲಮಶ್ಶೇರಿ ವೈದ್ಯಕೀಯ ಕಾಲೇಜಿನಲ್ಲಿ, ಇಬ್ಬರು ಸನ್ರೈಸ್ ಆಸ್ಪತ್ರೆಯಲ್ಲಿ, 4 ಮಂದಿ ರಾಜಗಿರಿ ಆಸ್ಪತ್ರೆಯಲ್ಲಿ ಹಾಗೂ ಇಬ್ಬರು ಮೆಡಿಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಇದೇ ವೇಳೆ, ಸ್ಪೋಟ ನಡೆಸಿದ ಶಂಕಿತ ಡೊಮಿನಿಕ್ ಮಾರ್ಟಿನ್ನನ್ನು ಪೊಲೀಸರು ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ಬಂಧಿಸಿದ್ದು, ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಆರೋಪಿ ಮಾರ್ಟಿನ್ ,ಈ ಸ್ಪೋಟವನ್ನು ನಾನೇ ಮಾಡಿದ್ದೇನೆ. ಇದರಲ್ಲಿ ಬೇರೆ ಯಾರದ್ದೇ ಕೈವಾಡ ಇಲ್ಲ. ತಾನೇ ಯೋಜನೆ ರೂಪಿಸಿ ಸ್ಪೋಟ ನಡೆಸಿದ್ದೇನೆ. ಯೂಟ್ಯೂಬ್ ನೋಡಿ ಸ್ಪೋಟಕವನ್ನು ತಯಾರಿಸಿದ್ದೇನೆ ಎಂದು ಆರೋಪಿ ಹೇಳಿದ್ದಾನೆ ಎಂದು ತಿಳಿದುಬಂದಿದೆ. ಪೊಲೀಸರು ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದಾರೆ.