ತಿರುವನಂತಪುರಂ : ಕಾಂಗ್ರೆಸ್ ನಾಯಕರಾಹುಲ್ ಗಾಂಧಿ ಅವರ ವಯನಾಡ್ ಕಚೇರಿಯನ್ನು ಎಸ್‌ಎಫ್‌ಐ ಕಾರ್ಯಕರ್ತರು ಧ್ವಂಸಗೊಳಿಸಿರುವುದು ಸೇರಿದಂತೆ ರಾಜ್ಯದಲ್ಲಿನ ಇತ್ತೀಚಿನ ರಾಜಕೀಯ ಬೆಳವಣಿಗೆಗಳಿಗೆ ಸಂಬಂಧಿಸಿದಂತೆ ವಿರೋಧ ಪಕ್ಷದ ಸದಸ್ಯರು ಘೋಷಣೆಗಳನ್ನು ಕೂಗಲು ಪ್ರಾರಂಭಿಸಿದ ಕಾರಣದಿಂದಾಗಿ 15ನೇ ಕೇರಳ ವಿಧಾನಸಭೆಯ ಐದನೇ ಅಧಿವೇಶನವನ್ನು ಸೋಮವಾರ ಬೆಳಗ್ಗೆ ಸ್ವಲ್ಪ ಸಮಯದವರೆಗೆ ಮುಂದೂಡಲಾಯಿತು.
ವಿಧಾನಮಂಡಲದ ಪ್ರಶ್ನೋತ್ತರ ಕಲಾಪ ಬೆಳಗ್ಗೆ 9 ಗಂಟೆಗೆ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಮೇಜು ಬಡಿಯಲು ಆರಂಭಿಸಿದ್ದವು. ಅದಲ್ಲದೆ ಮೊದಲ ಪ್ರಶ್ನೆಗೆ ಉತ್ತರ ನೀಡುತ್ತಿದ್ದಂತೆಯೇ ಪ್ರತಿಪಕ್ಷದವರು ಘೋಷಣೆಗಳನ್ನು ಕೂಗಲಾರಂಭಿಸಿದ್ದರು. ಸಭಾಪತಿ ಎಂ.ಬಿ.ರಾಜೇಶ್ ಅವರು ಸದನದ ಪ್ರಶ್ನೋತ್ತರ ವೇಳೆಗೆ ಅಡ್ಡಿಪಡಿಸದಂತೆ ಹಲವು ಬಾರಿ ಕೇಳಿಕೊಂಡರೂ ಪ್ರತಿಪಕ್ಷದ ಸದಸ್ಯರು ಅವರ ಮಾತಿಗೆ ಕಿವಿಗೊಡದೆ ಗಲಭೆ ಸೃಷ್ಟಿಸುವುದರಲ್ಲೇ ನಿರತರಾಗಿದ್ದರು.
ಭಿತ್ತಿಪತ್ರಗಳು ಮತ್ತು ಬ್ಯಾನರ್‌ಗಳನ್ನು ಬೀಸದಂತೆ, ಹಾಗೇ ಮಾಡುವುದು ಸದನದ ನಿಯಮಾವಳಿಗಳನ್ನು ಉಲ್ಲಂಘಿಸಿದಂತೆ ಎಂದು ಹೇಳಿ ವಿಪಕ್ಷಗಳ ಸದಸ್ಯರನ್ನು ಕುಳಿತುಕೊಳ್ಳುವಂತೆ ಸ್ಪೀಕರ್ ತಿಳಿಸಿದ್ದರು. ಆದರೆ, ವಿರೋಧ ಪಕ್ಷದ ಸದಸ್ಯರು "SFI ಗೂಂಡಾವಾದ" ಎಂದು ಘೋಷಣೆಗಳನ್ನು ಕೂಗುತ್ತಿದ್ದರು. ಇದಕ್ಕೆ ಕಿವಿಗೊಡದ ಕಾರಣ ಎಲ್ಡಿಎಫ್ ಶಾಸಕರು ಹಾಗೂ ಇವರ ಮಧ್ಯೆ ಮಾತಿನ ಚಕಮಕಿ ನಡೆಯಿತು.