ತಿರುವನಂತಪುರಂ(ಕೇರಳ): ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿದ್ದು, ಪ್ರತಿದಿನ ಲಕ್ಷಾಂತರ ಕೋವಿಡ್ ಪ್ರಕರಣಗಳು ದಾಖಲಾಗುತ್ತಿವೆ. ಈ ಮಧ್ಯೆ ದೇಶದಲ್ಲಿ ಕೆಲವೊಂದು ವಿಚಿತ್ರ ಘಟನೆಗಳು ಸಹ ಬೆಳಕಿಗೆ ಬರುತ್ತಿವೆ.
ವರನಿಗೆ ಕೊರೊನಾ: ಪಿಪಿಇ ಕಿಟ್ ಧರಿಸಿ ಆಸ್ಪತ್ರೆಯಲ್ಲೇ ತಾಳಿ ಕಟ್ಟಿಸಿಕೊಂಡಳು ವಧು..!
ಕೇರಳದ ಆಸ್ಪತ್ರೆಯಲ್ಲೇ ಜೋಡಿವೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದು, ಈ ವೇಳೆ ವಧು ಪಿಪಿಇ ಕಿಟ್ ಧರಿಸಿ ತಾಳಿ ಕಟ್ಟಿಸಿಕೊಂಡಿರುವ ವಿಚಿತ್ರ ಘಟನೆ ಕೇರಳದಲ್ಲಿ ನಡೆದಿದೆ.
ಡೆಡ್ಲಿ ವೈರಸ್ ಕಾರಣ ರಾಜಸ್ಥಾನದ ಪೊಲೀಸ್ ಪೇದೆಯೋರ್ವಳಿಗೆ ರಜೆ ಸಿಗದ ಕಾರಣ ಪೊಲೀಸ್ ಠಾಣೆಯಲ್ಲೇ ಅರಿಶಿಣ ಶಾಸ್ತ್ರ ಕಾರ್ಯಕ್ರಮ ನಡೆಸಲಾಗಿತ್ತು. ಇದೀಗ ಕೇರಳದ ಅಲಪ್ಪುಜಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಜೋಡಿವೊಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ. ವಿಶೇಷವೆಂದರೆ ಮದುಮಗನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದರಿಂದ ಆತನ ಎದುರು ಪಿಪಿಇ ಕಿಟ್ ಧರಿಸಿಕೊಂಡು ವಧು ತಾಳೆ ಕಟ್ಟಿಸಿಕೊಂಡಿದ್ದಾಳೆ.
ಜಿಲ್ಲಾಧಿಕಾರಿಗಳ ಅನುಮತಿಯೊಂದಿಗೆ ಈ ಮದುವೆ ಆಸ್ಪತ್ರೆಯಲ್ಲಿ ನಡೆದಿದ್ದು, ಇದರ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೇರಳದಲ್ಲಿ ಪ್ರತಿದಿನ ಸಾವಿರಾರು ಕೋವಿಡ್ ಪ್ರಕರಣಗಳು ದಾಖಲಾಗುತ್ತಿಚೆ. ಶನಿವಾರ 26,685 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, 73 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ 1.98 ಲಕ್ಷ ಸಕ್ರಿಯ ಪ್ರಕರಣಗಳಿವೆ.