ಕಣ್ಣೂರು (ಕೇರಳ): ಈಶಾನ್ಯ ರಾಜ್ಯ ಮಣಿಪುರವು ಜನಾಂಗೀಯ ಹಿಂಸಾಚಾರದಿಂದ ತತ್ತರಿಸಿದೆ. ಇದರಿಂದ ಅನೇಕ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಅಡ್ಡಿಯುಂಟಾಗಿದೆ. ಆದ್ದರಿಂದ ಮಣಿಪುರದ ಕುಕಿ ಸಮುದಾಯದ ವಿದ್ಯಾರ್ಥಿಗಳು ತಮ್ಮ ಉನ್ನತ ಅಧ್ಯಯನಕ್ಕಾಗಿ ಕೇರಳದ ಕಣ್ಣೂರು ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪಡೆದಿದ್ದಾರೆ.
ಪರಿಶಿಷ್ಟ ಪಂಗಡದ ಮೀಸಲಾತಿ ವಿಚಾರವಾಗಿ ಮೇ 3ರಿಂದ ಮೈತೇಯಿ ಮತ್ತು ಕುಕಿ ಸಮುದಾಯಗಳ ನಡುವಿನ ಹಿಂಸಾಚಾರ ಭುಗಿಲೆದ್ದಿದೆ. ಈ ಹಿನ್ನೆಲೆಯಲ್ಲಿ ಮಣಿಪುರದ ವಿದ್ಯಾರ್ಥಿಗಳಿಗೆ ಉನ್ನತ ವ್ಯಾಸಂಗಕ್ಕಾಗಿ ಕಣ್ಣೂರು ವಿಶ್ವವಿದ್ಯಾಲಯವು ವಿಶೇಷ ಸೀಟುಗಳನ್ನು ಹಂಚಿಕೆ ಮಾಡಿದೆ. ಜುಲೈ 7ರಂದು ಕರೆದಿದ್ದ ಸಿಂಡಿಕೇಟ್ ಸಭೆಯು ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದೆ.
ಮಣಿಪುರದ ವಿದ್ಯಾರ್ಥಿ ಸಂಘಟನೆಗಳ ಮನವಿಯನ್ನು ಪರಿಗಣಿಸಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಅಂತೆಯೇ, ವಿದ್ಯಾರ್ಥಿಗಳ ಮೊದಲ ಬ್ಯಾಚ್ ಬುಧವಾರ ಕಣ್ಣೂರಿಗೆ ತಲುಪಿದೆ. ವಿಶ್ವವಿದ್ಯಾಲಯದ ಉಪಕುಲಪತಿ ಪ್ರೊ. ಗೋಪಿನಾಥ್ ರವೀಂದ್ರನ್ ಪ್ರತಿಕ್ರಿಯಿಸಿ, ಕಣ್ಣೂರು ವಿಶ್ವವಿದ್ಯಾನಿಲಯದಲ್ಲಿ ಅಧ್ಯಯನ ಮಾಡಲು ಬಯಸುವ 70 ಮಣಿಪುರ ವಿದ್ಯಾರ್ಥಿಗಳ ಪಟ್ಟಿಯನ್ನು ಸ್ವೀಕರಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರ ಬ್ಯಾಚ್ ವಿದ್ಯಾರ್ಥಿಗಳು ಆಗಮಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಕೇರಳದಲ್ಲಿ ಅಧ್ಯಯನ ಮಾಡುವ ಮಣಿಪುರದ ವಿದ್ಯಾರ್ಥಿಗಳು ಕೋರ್ಸ್ ಹಾಗೂ ಪ್ರವೇಶ ಪ್ರಕ್ರಿಯೆ ಕುರಿತು ಸಮನ್ವಯತೆ ಸಾಧಿಸಲು ವಿಶ್ವವಿದ್ಯಾಲಯವು ವಿಶೇಷ ಸಮಿತಿಯನ್ನೂ ರಚಿಸಿದೆ. ಈ ಸಮಿತಿಯು ರಿಜಿಸ್ಟ್ರಾರ್ ಮತ್ತು ಸಿಂಡಿಕೇಟ್ ಸದಸ್ಯರ ನೇತೃತ್ವದಲ್ಲಿದೆ. ಅನೇಕ ವಿದ್ಯಾರ್ಥಿಗಳು ತಾವು ಓದುತ್ತಿರುವ ಕೋರ್ಸ್ಅನ್ನೇ ಮುಂದುವರಿಸಲು ಬಯಸುತ್ತಿದ್ದಾರೆ. ವಿದ್ಯಾರ್ಥಿಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವಿಶ್ವವಿದ್ಯಾಲಯವು ಈಗಾಗಲೇ ಐದು ಕಾಲೇಜುಗಳೊಂದಿಗೆ ಚರ್ಚೆ ನಡೆಸಿದೆ ಎಂದು ಹೇಳಿದ್ದಾರೆ.
ಮಣಿಪುರದ ಭೀಕರ ಪರಿಸ್ಥಿತಿಯಿಂದಾಗಿ ಅನೇಕ ವಿದ್ಯಾರ್ಥಿಗಳಿಗೆ ತಮ್ಮ ಶೈಕ್ಷಣಿಕ ಅರ್ಹತೆ ಸಾಬೀತುಪಡಿಸುವ ದಾಖಲೆಗಳನ್ನು ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಕಣ್ಣೂರು ವಿವಿಯಲ್ಲಿ ವ್ಯಾಸಂಗ ಮುಗಿಯುವುದರೊಳಗೆ ತಮ್ಮ ಹಿಂದಿನ ಶೈಕ್ಷಣಿಕ ಪ್ರಮಾಣಪತ್ರಗಳನ್ನು ಸಲ್ಲಿಸಲು ಕಾಲಾವಕಾಶ ನೀಡುವುದಾಗಿ ವಿಶ್ವವಿದ್ಯಾಲಯ ಪ್ರಕಟಿಸಿದೆ. ಆಸಕ್ತರು ಮಣಿಪುರ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಆರ್ಥಿಕ ನೆರವು ನೀಡಲು ಮುಂದೆ ಬರಬಹುದು ಎಂದೂ ವಿಸಿ ತಿಳಿಸಿದ್ದಾರೆ.
ಪ್ರಸ್ತುತ ವಿಶ್ವವಿದ್ಯಾಲಯವು ಮಣಿಪುರದ ವಿದ್ಯಾರ್ಥಿಗಳಿಗೆ ಅಧ್ಯಯನ ಮತ್ತು ವಸತಿ, ಊಟದ ಸೌಲಭ್ಯ ಉಚಿತವಾಗಿ ಒದಗಿಸಲು ನಿರ್ಧರಿಸಿದೆ. ಕಾಲೇಜುಗಳಿಗೂ ಊಟ, ವಸತಿ ಸೇರಿದಂತೆ ಮೂಲ ಸೌಕರ್ಯಗಳನ್ನು ಉಚಿತವಾಗಿ ಒದಗಿಸುವಂತೆ ಕೋರಲಾಗುವುದು. ಸ್ನಾತಕೋತ್ತರ ವಿಭಾಗದಲ್ಲಿ ರಾಜ್ಯಶಾಸ್ತ್ರ, ಇಂಗ್ಲಿಷ್, ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ, ಸಮಾಜಶಾಸ್ತ್ರ, ರಸಾಯನಶಾಸ್ತ್ರ, ಮಾನವಶಾಸ್ತ್ರ, ಭೂಗೋಳಶಾಸ್ತ್ರ, ಅರ್ಥಶಾಸ್ತ್ರ, ಭೌತಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಪರಿಸರ ವಿಜ್ಞಾನ, ಜೈವಿಕ ತಂತ್ರಜ್ಞಾನ, ಸಮಾಜಕಾರ್ಯ, ಪ್ರವಾಸೋದ್ಯಮ, ಸಂಗೀತ, ಕಂಪ್ಯೂಟರ್ ಸೈನ್ಸ್, ದೈಹಿಕ ಶಿಕ್ಷಣ, ಎಂಕಾಂ. ಕೋರ್ಸ್‌ಗಳಲ್ಲಿ ಮಣಿಪುರದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುತ್ತದೆ. ಆದರೆ, ಎಂಜಿನಿಯರಿಂಗ್‌ನಂತಹ ವೃತ್ತಿಪರ ವಿಷಯಗಳಿಗೆ ಪ್ರವೇಶ ನೀಡುವಲ್ಲಿ ತಾಂತ್ರಿಕ ಸಮಸ್ಯೆಗಳಿವೆ ಎಂದು ವಿಸಿ ಗೋಪಿನಾಥ್ ರವೀಂದ್ರನ್ ವಿವರಿಸಿದರು.
ಇದನ್ನೂ ಓದಿ:NEET PG: ವೈದ್ಯಕೀಯ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್.. ನೀಟ್ ಪರೀಕ್ಷೆ ಕಟ್ ಆಫ್ ಅಂಕ ರದ್ದು, ಎಲ್ಲರಿಗೂ ಕೌನ್ಸೆಲಿಂಗ್ಗೆ ಅರ್ಹತೆ