ಕೋಯಿಕ್ಕೋಡ್ (ಕೇರಳ): ನಿಫಾ ವೈರಸ್ನಿಂದ ಕೇರಳ ಕಂಗಾಲಾಗಿದ್ದು, ಈ ಬೆನ್ನಲ್ಲೇ ಅಲ್ಲಿನ ಆರೋಗ್ಯ ಇಲಾಖೆಯಿಂದ ನಿರಾಳವಾದ ಸುದ್ದಿಯೊಂದು ಹೊರಬಿದ್ದಿದೆ. ಇತ್ತೀಚೆಗೆ ನಿಫಾ ವೈರಸ್ನಿಂದ ಮೃತಪಟ್ಟಿದ್ದ 12 ವರ್ಷದ ಬಾಲಕನ ನಿಕಟ ಸಂಪರ್ಕದಲ್ಲಿದ್ದ 20 ಮಂದಿಯ ವರದಿ ನೆಗೆಟಿವ್ ಬಂದಿದೆ.
20 ಮಾದರಿಗಳಲ್ಲಿ 15 ಪುಣೆಯಲ್ಲಿ ಮತ್ತು ಕೋಯಿಕ್ಕೋಡ್ 5 ಮಾದರಿಗಳ ಪರೀಕ್ಷೆ ನಡೆಸಲಾಗಿದೆ. ಇಲ್ಲಿಯವರೆಗೆ ಸುಮಾರು 30 ಮಂದಿಯನ್ನು ಪರೀಕ್ಷೆ ಒಳಪಡಿಸಲಾಗಿದ್ದು, ಎಲ್ಲರ ವರದಿಯೂ ನೆಗೆಟಿವ್ ಆಗಿದೆ. ಪ್ರಸ್ತುತ ಕೋಯಿಕ್ಕೋಡ್ನಲ್ಲಿರುವ ವೈದ್ಯಕೀಯ ಕಾಲೇಜಿನಲ್ಲಿ ನಿಫಾ ಸೋಂಕಿತರ ಸಂಪರ್ಕಕ್ಕೆ ಬಂದಿದ್ದ ಸುಮಾರು 68 ಮಂದಿಯನ್ನು ಪ್ರತ್ಯೇಕವಾಗಿ ಇಡಲಾಗಿದೆ. ಅವರ ಆರೋಗ್ಯವನ್ನು 42 ದಿನಗಳ ಕಾಲ ಮೇಲ್ವಿಚಾರಣೆ ಮಾಡಲಾಗುತ್ತದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಕೇರಳದ ಆರೋಗ್ಯ ಸಚಿವೆ ವೀಣಾ ಜಾರ್ಜ್ ನಿಫಾ ಸೋಂಕಿತರೊಂದಿಗೆ ಸಂಪರ್ಕದಲ್ಲಿದ್ದವರ ಆರೋಗ್ಯದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಎಲ್ಲರ ಆರೋಗ್ಯವೂ ಸರಿಯಾಗಿದೆ ಎಂದು ಮಾಹಿತಿ ನೀಡಿದ್ದಾರೆ. ನಿಫಾ ಹರಡಿರುವ ಪ್ರದೇಶದ ಪ್ರಾಣಿಗಳಿಂದ ಮಾದರಿ ಸಂಗ್ರಹಿಸಲು ತಜ್ಞರ ತಂಡದೊಂದಿಗೆ, ರಾಜ್ಯದ ಆರೋಗ್ಯ ಇಲಾಖೆಯು ಸಮನ್ವಯ ಸಾಧಿಸಲಿದೆ ಎಂದು ವೀಣಾ ಜಾರ್ಜ್ ಸ್ಪಷ್ಟನೆ ನೀಡಿದ್ದಾರೆ.