ತ್ರಿಶ್ಶೂರ್ (ಕೇರಳ):ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶದ ಕುರಿತು ಭಾನುವಾರ ಪ್ರತಿಕ್ರಿಯಿಸಿದ ಕೇರಳ ಸಿಎಂ ಪಿಣರಾಯಿ ವಿಜಯನ್, "ಈ ಫಲಿತಾಂಶ ದೇಶದ ಧನಾತ್ಮಕ ಭವಿಷ್ಯವನ್ನು ಸೂಚಿಸುತ್ತದೆ. ಜನರು ಬಿಜೆಪಿಗೆ ತಕ್ಕ ಉತ್ತರ ನೀಡಿದ್ದಾರೆ" ಎಂದರು. ಆಡಳಿತಾರೂಢ ಲೆಫ್ಟ್ ಡೆಮಾಕ್ರಟಿಕ್ ಫ್ರಂಟ್‌ನ (ಎಲ್‌ಡಿಎಫ್) 2ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು.
"ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಬಾರದು ಎಂಬ ಬಲವಾದ ಭಾವನೆ ದೇಶದಲ್ಲಿ ಮೂಡಿದೆ. ಕಾಂಗ್ರೆಸ್ ದೀರ್ಘಕಾಲ ದೇಶವನ್ನು ಏಕಾಂಗಿಯಾಗಿ ಆಳಿತ್ತು. ಪ್ರಸ್ತುತ ರಾಜಕೀಯ ಪರಿಸ್ಥಿತಿ ಹಾಗಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆಯುವುದೇ ನಮ್ಮ ಗುರಿಯಾಗಬೇಕು. ಕಾಂಗ್ರೆಸ್ ಕೂಡ ಅದರಲ್ಲಿ ಪಾತ್ರ ವಹಿಸಬೇಕು. ಕಾಂಗ್ರೆಸ್ ಹಿಂದಿನಂತೆ ಪ್ರಬಲವಾಗಿಲ್ಲ ಎಂಬುದನ್ನೂ ಅರಿತುಕೊಳ್ಳಬೇಕು".
"ಬಿಜೆಪಿ ವಿರೋಧ ಪಕ್ಷದಲ್ಲಿ ಸುಮ್ಮನೆ ಕುಳಿತುಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಸೋತರೂ ಅಧಿಕಾರಕ್ಕೆ ಬರಲು ಆ ಪಕ್ಷ ಪ್ರಯತ್ನಿಸುತ್ತದೆ. ಈ ಹಿಂದೆ ಕಾಂಗ್ರೆಸ್ ಶಾಸಕರು ಅವರ ಪ್ರಯತ್ನಕ್ಕೆ ಬೆಂಬಲ ನೀಡಿದ್ದರು. ಎಚ್ಚರಿಕೆ ವಹಿಸಬೇಕು" ಎಂದು ಸಿಎಂ ಕಿವಿಮಾತು ಹೇಳಿದ್ದಾರೆ.
"ದೇಶದಲ್ಲಿ ಏನು ಬೇಕಾದರೂ ಮಾಡಬಹುದು ಎಂಬುದು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಸಂಘ ಪರಿವಾರದ ನಿಲುವಾಗಿತ್ತು. ಇದಕ್ಕೆ ಕರ್ನಾಟಕದ ಜನತೆ ಪ್ರತ್ಯುತ್ತರ ನೀಡಿದ್ದಾರೆ. ಹೀಗೇ ಮುಂದುವರಿಯಲು ಬಿಡುವುದಿಲ್ಲ ಎಂದು ತೋರಿಸಿಕೊಟ್ಟಿದ್ದಾರೆ. ಈಗ ದಕ್ಷಿಣ ಭಾರತದ ಯಾವುದೇ ರಾಜ್ಯದಲ್ಲಿಯೂ ಬಿಜೆಪಿ ಆಡಳಿತವಿಲ್ಲ" ಎಂದು ಪಿಣರಾಯಿ ಸಂತಸ ವ್ಯಕ್ತಪಡಿಸಿದರು.