ಅಮೃತಸರ: ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಶುಕ್ರವಾರ 400 ಹೊಸ 'ಆಮ್ ಆದ್ಮಿ' ಚಿಕಿತ್ಸಾಲಯಗಳನ್ನು ರಾಜ್ಯದ ಜನತೆಗೆ ಅರ್ಪಿಸಿದ್ದಾರೆ. ಈ ಹೊಸ ಕ್ಲಿನಿಕ್‌ಗಳ ಆರಂಭದೊಂದಿಗೆ ಮೊಹಲ್ಲಾ ಕ್ಲಿನಿಕ್‌ಗಳ ಒಟ್ಟು ಸಂಖ್ಯೆ 500 ಕ್ಕೆ ತಲುಪಿದಂತಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಕೇಜ್ರಿವಾಲ್, ಪಂಜಾಬ್‌ನಲ್ಲಿ ಎಎಪಿ ಸರ್ಕಾರ ಕೇವಲ 10 ತಿಂಗಳಲ್ಲಿ 500 ಮೊಹಲ್ಲಾ ಕ್ಲಿನಿಕ್‌ಗಳನ್ನು ತೆರೆದಿರುವುದು ತುಂಬಾ ಸಂತೋಷದ ವಿಷಯವಾಗಿದೆ ಎಂದು ಹೇಳಿದರು.
ಪಂಜಾಬ್‌ನಲ್ಲಿ 500 ಮೊಹಲ್ಲಾ ಚಿಕಿತ್ಸಾಲಯಗಳನ್ನು ಸ್ಥಾಪಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಇನ್ನಷ್ಟು ಸೌಲಭ್ಯಗಳು ಬರಲಿವೆ ಎಂದು ಕೇಜ್ರಿವಾಲ್ ಪಂಜಾಬ್ ಜನತೆಗೆ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಪಂಜಾಬ್ ಆರೋಗ್ಯ ಸಚಿವ ಬಲ್ಬೀರ್ ಸಿಂಗ್ ಮತ್ತು ಆಪ್ ಸಂಸದ ರಾಘವ್ ಚಡ್ಡಾ ಕೂಡಾ ಉಪಸ್ಥಿತರಿದ್ದರು.
ನಿನ್ನೆಯಷ್ಟೇ ಹೊಸ ಯೋಜನೆ ಘೋಷಣೆ ಮಾಡಿದ್ದ ಸಿಎಂ:ಗುರುವಾರ ಗಣರಾಜ್ಯೋತ್ಸವದ ಸಂದರ್ಭದಲ್ಲಿ ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಹೊಸ ಮೊಹಲ್ಲಾ ಕ್ಲಿನಿಕ್‌ಗಳ ಉದ್ಘಾಟನೆಯ ಕುರಿತು ಘೋಷಣೆ ಮಾಡಿದ್ದರು. ಬಟಿಂಡಾದ ಶಹೀದ್ ಭಗತ್ ಸಿಂಗ್ ಸ್ಟೇಡಿಯಂನಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿದ ನಂತರ ಅವರು ತಮ್ಮ ಗಣರಾಜ್ಯೋತ್ಸವ ಭಾಷಣದಲ್ಲಿ ಮೊಹಲ್ಲಾ ಕ್ಲಿನಿಕ್‌ಗಳ ಬಗ್ಗೆ ಘೋಷಿಸಿದ್ದರು. ಪಂಜಾಬ್‌ನಲ್ಲಿ ಮತ್ತಷ್ಟು ಮೊಹಲ್ಲಾ ಚಿಕಿತ್ಸಾಲಯಗಳನ್ನು ಉದ್ಘಾಟಿಸಲು ಎಎಪಿ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅಮೃತಸರ ತಲುಪಲಿದ್ದಾರೆ ಎಂದು ಸಿಎಂ ಮಾನ್ ತಮ್ಮ ಭಾಷಣದಲ್ಲಿ ತಿಳಿಸಿದ್ದರು.
ಜನರ ಸ್ಪಂದನೆ ಹಿನ್ನೆಲೆಯಲ್ಲಿ ನಿರ್ಧಾರ:ರಾಜ್ಯದಲ್ಲಿ ಈಗಾಗಲೇ ಕಾರ್ಯನಿರ್ವಹಿಸುತ್ತಿರುವ ಮೊಹಲ್ಲಾ ಚಿಕಿತ್ಸಾಲಯಗಳಿಗೆ ಪಂಜಾಬ್ ಜನರು ಉತ್ತಮವಾಗಿ ಸ್ಪಂದಿಸಿದ್ದಾರೆ ಎಂದು ಅವರು ಹೇಳಿದರು. ಆಗಸ್ಟ್ 15, 2022 ರಂದು ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ, ಮೊದಲ ಹಂತದಲ್ಲಿ 100 ಮೊಹಲ್ಲಾ ಕ್ಲಿನಿಕ್‌ಗಳನ್ನು ಉದ್ಘಾಟಿಸಲಾಗಿತ್ತು. ಇಂದು ಅಮೃತಸರದಲ್ಲಿ ತೆರೆಯಲಿರುವ ಪ್ರತಿ ಮೊಹಲ್ಲಾ ಕ್ಲಿನಿಕ್‌ಗೆ ಸುಮಾರು 25 ಲಕ್ಷ ರೂ.ಗಳನ್ನು ನಿಗದಿಪಡಿಸಲಾಗಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.