ನವದೆಹಲಿ:ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೆಹಲಿ ಸರ್ಕಾರದ ಬಜೆಟ್ ಅಧಿವೇಶನದಲ್ಲಿ ಭಾಗಿಯಾಗಿ ಮಾತನಾಡಿದ್ದು, ತಾವೊಬ್ಬ ಹನುಮನ ಭಕ್ತ ಎಂದು ಹೇಳಿಕೊಂಡಿದ್ದಾರೆ. ಜತೆಗೆ ರಾಮರಾಜ್ಯ ಪರಿಕಲ್ಪನೆ ಗಮನದಲ್ಲಿಟ್ಟುಕೊಂಡು ಪ್ರಮುಖ 10 ನಿಯಮ ಜಾರಿಗೊಳಿಸುವುದಾಗಿ ತಿಳಿಸಿದ್ದಾರೆ.
ಅಧಿವೇಶನದಲ್ಲಿ ಭಾಗಿಯಾಗಿ ಮಾತನಾಡಿದ ಅವರು, ನಾನು ರಾಮನ ಭಕ್ತನಾಗಿರುವ ಹನುಮನ ಭಕ್ತ. ಅಯೋಧ್ಯೆಯಲ್ಲಿ ರಾಮ ರಾಜನಾಗಿದ್ದ ವೇಳೆ ಆಳ್ವಿಕೆ ಉತ್ತಮವಾಗಿತ್ತು ಎಂದು ಹೇಳಲಾಗುತ್ತದೆ. ಹೀಗಾಗಿ ಅದನ್ನ ರಾಮರಾಜ್ಯ ಎಂದು ಕರೆಯಲಾಗುತ್ತಿತ್ತು. ಇದೀಗ ದೆಹಲಿಯಲ್ಲಿ ಆ ಪರಿಕಲ್ಪನೆ ಜಾರಿಗೆ ತರಲು ನಾವು ಸಿದ್ಧರಾಗಿದ್ದೇವೆ ಎಂದು ಕೇಜ್ರಿವಾಲ್ ತಿಳಿಸಿದ್ದಾರೆ.
ವಿಧಾನಸಭೆಯಲ್ಲಿ ರಾಮರಾಜ್ಯ ಪರಿಕಲ್ಪನೆ ವಿವರಿಸಿದ ಕೇಜ್ರಿವಾಲ್ 10 ನಿಯಮ ವಿವರಿಸುವಾಗ ರಾಮ ರಾಜ್ಯದ ಪರಿಕಲ್ಪನೆಯ ಜತೆಗೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು ಎಂದರು. ದೆಹಲಿಯಲ್ಲಿ ಕಾಂಗ್ರೆಸ್ 70 ವರ್ಷಗಳಿಗಿಂತಲೂ ಹೆಚ್ಚು ಕಾಲ ಆಡಳಿತ ನಡೆಸಿತು. ಆದರೆ ಶಿಕ್ಷಣ ಮಹತ್ವ ಎಂದಿಗೂ ಒತ್ತಿ ಹೇಳಲಿಲ್ಲ. ಹೀಗಾಗಿ ಸಮಾಜದ ಒಂದು ದೊಡ್ಡ ಭಾಗ ಈಗಲೂ ಅನಕ್ಷರಸ್ಥವಾಗಿದೆ. ಜನರಿಗೆ ಸರಿಯಾದ ಶಿಕ್ಷಣ ನೀಡಿದ್ರೆ, ನಮ್ಮ ವಿರುದ್ಧ ಪ್ರಶ್ನೆ ಎತ್ತುತ್ತಾರೆ ಹಾಗೂ ಚುನಾವಣೆಯಲ್ಲಿ ಸೋಲಿಸುತ್ತಾರೆಂಬ ಭಯವಿತ್ತು ಎಂದಿದ್ದಾರೆ.
ಇದನ್ನೂ ಓದಿ:ಬಾಯಾರಿದ ನಾಗರಹಾವಿಗೆ ನೀರು ಕುಡಿಸಿದ ವ್ಯಕ್ತಿ.. ವಿಡಿಯೋ ವೈರಲ್!
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಪೂರ್ಣಗೊಂಡ ಬಳಿಕ ದೆಹಲಿಯ ಹಿರಿಯ ನಾಗರಿಕರನ್ನ ಅಲ್ಲಿಗೆ ದರ್ಶನಕ್ಕಾಗಿ ಕಳುಹಿಸಲಾಗುವುದು ಎಂದು ಕೇಜ್ರಿವಾಲ್ ತಿಳಿಸಿದ್ದಾರೆ. ಪ್ರಮುಖವಾಗಿ ದೆಹಲಿಯಲ್ಲಿ ಆಹಾರ, ಶಿಕ್ಷಣ, ವಿದ್ಯುತ್, ನೀರು, ಉದ್ಯೋಗ, ಮಹಿಳಾ ಭದ್ರತೆ ಹಾಗೂ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದಿದ್ದಾರೆ. ಇದೇ ವೇಳೆ ದೆಹಲಿಯ ಎಲ್ಲ ಶಾಸಕರು ಸರ್ಕಾರಿ ಆಸ್ಪತ್ರೆಗಳಿಗೆ ತೆರಳಿ ಕೋವಿಡ್ ಲಸಿಕೆ ಹಾಕಿಸಿಕೊಳ್ಳುವಂತೆ ಅವರು ಮನವಿ ಮಾಡಿದ್ದಾರೆ.