ನವದೆಹಲಿ:ಅಬಕಾರಿ ನೀತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಎದುರಿಸಲು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಂದು ನವದೆಹಲಿಯ ಕೇಂದ್ರೀಯ ತನಿಖಾ ಸಂಸ್ಥೆಯ(ಸಿಬಿಐ) ಕಚೇರಿಗೆ ಹಾಜರಾಗಿದ್ದರು. ಸುಮಾರು 9 ಗಂಟೆಗಳ ಕಾಲ ವಿಚಾರಣೆ ಮುಗಿಸಿ ಹೊರಬಂದು ಮಾತನಾಡಿದ ಅವರು, ಸಿಬಿಐ ನನಗೆ ಒಟ್ಟು 56 ಪ್ರಶ್ನೆಗಳನ್ನು ಕೇಳಿದೆ. ಆದರೆ ಎಲ್ಲವೂ ನಕಲಿ, ಪ್ರಕರಣ ಕೂಡಾ ನಕಲಿ, ಅವರ ಬಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಮ್ಮನ್ನು ಆರೋಪಿಗಳನ್ನಾಗಿಸಲು ಒಂದೇ ಒಂದು ಪುರಾವೆಯೂ ಇಲ್ಲ ಎಂದು ನನಗೆ ಮನವರಿಕೆಯಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಪ್ರಾಮಾಣಿಕತೆಯೊಂದಿಗೆ ರಾಜಿ ಇಲ್ಲ: ಮದ್ಯ ನೀತಿಯ ಪ್ರಕರಣ ಸುಳ್ಳು, ಕಟ್ಟುಕಥೆ, ಪ್ರಾಮಾಣಿಕತೆ ನಮ್ಮ ಸಿದ್ಧಾಂತ, ನಾವು ಸಾಯಲೂ ಸಿದ್ಧರಿದ್ದೇವೆ. ಆದರೆ ಪ್ರಾಮಾಣಿಕತೆಯೊಂದಿಗೆ ರಾಜಿ ಮಾಡಿಕೊಳ್ಳುವುದಿಲ್ಲ. ಅವರು ನಮಗೆ ಮತ್ತು ನಮ್ಮ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ದೂಷಿಸಲು ಇದನ್ನೆಲ್ಲ ಮಾಡುತ್ತಿದ್ದಾರೆ. ನಮ್ಮದು ರಾಷ್ಟ್ರೀಯ ಪಕ್ಷ. ಈಗ ಅದಕ್ಕಾಗಿಯೇ ಅವರು ನಮ್ಮನ್ನು ಕೊನೆಗೊಳಿಸಲು ಇದನ್ನೆಲ್ಲ ಮಾಡುತ್ತಿದ್ದಾರೆ ಎಂದು ಕೇಜ್ರಿವಾಲ್ ಆಕ್ರೋಶ ವ್ಯಕ್ತಪಡಿಸಿದರು.
ಕಪ್ಪು SUVಯಲ್ಲಿ (ವಾಹನ) ಬೆಳಿಗ್ಗೆ 11 ಗಂಟೆಯ ಸುಮಾರಿಗೆ ಭಾರಿ ಭದ್ರತೆಯೊಂದಿಗೆ ಸಿಬಿಐ ಪ್ರಧಾನ ಕಚೇರಿಗೆ ಆಗಮಿಸಿದ್ದ ಎಎಪಿ ಮುಖ್ಯಸ್ಥರನ್ನು ಭ್ರಷ್ಟಾಚಾರ ನಿಗ್ರಹ ದಳದ ಮೊದಲ ಮಹಡಿಯ ಕಚೇರಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ತನಿಖಾ ತಂಡ ಸುಮಾರು 9 ಗಂಟೆಗಳ ಕಾಲ ಪ್ರಶ್ನಿಸಿತ್ತು.