ನವದೆಹಲಿ: ಭಯೋತ್ಪಾದಕರ ಎನ್‌ಕೌಂಟರ್‌ನಲ್ಲಿ ನಮ್ಮ ಸೈನಿಕರು ಹುತಾತ್ಮರಾಗುತ್ತಿದ್ದರೆ ಪಾಕಿಸ್ತಾನದ ವಿದೇಶಾಂಗ ಸಚಿವರು ಭಾರತ ಪ್ರವಾಸ ಕೈಗೊಂಡಿರುವುದು ಇಲ್ಲಿನ ಜನರಲ್ಲಿ ನೋವು ಮತ್ತು ಕೋಪ ತರಿಸಿದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ. ಶುಕ್ರವಾರ ಜಮ್ಮು ಮತ್ತು ಕಾಶ್ಮೀರದ ರಾಜೌರಿಯಲ್ಲಿ ಭಯೋತ್ಪಾದಕರ ವಿರುದ್ಧದ ಕಾರ್ಯಾಚರಣೆಯಲ್ಲಿ ನಮ್ಮ ಐವರು ಸೇನಾ ಯೋಧರು ಹುತಾತ್ಮರಾಗಿದ್ದಾರೆ. ಈ ಸಂದರ್ಭದಲ್ಲಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಅವರಿಗೆ ಮೋದಿ ಸರ್ಕಾರವು ಆತ್ಮೀಯ ಸ್ವಾಗತವನ್ನು ನೀಡಿರುವುದನ್ನು ಆಕ್ಷೇಪಿಸಿ ಎಎಪಿ ಸಂಸದ ಸಂಜಯ್ ಸಿಂಗ್ ಅವರ ಟ್ವೀಟ್ ಅನ್ನು ಸಿಎಂ ಕೇಜ್ರಿವಾಲ್ ರಿಟ್ವೀಟ್ ಮಾಡಿದ್ದಾರೆ.
ರಿಟ್ವೀಟ್ ಮಾಡಿರುವ ಕೇಜ್ರಿವಾಲ್ ತಮ್ಮ ಟ್ವೀಟ್‌ನಲ್ಲಿ, ಇಲ್ಲಿ ನಮ್ಮ ಭಾರತೀಯ ಸೈನಿಕರು ಹುತಾತ್ಮರಾಗುತ್ತಿದ್ದಾರೆ. ಆದರೆ ವಿಪರ್ಯಾಸ ಎಂಬಂತೆ ಕೇಂದ್ರ ಸರ್ಕಾರವು ಪಾಕಿಸ್ತಾನದ ವಿದೇಶಾಂಗ ಸಚಿವರೊಂದಿಗೆ ಮಾತುಕತೆಯಲ್ಲಿ ತೊಡಗಿರುವುದರಿಂದ ಭಾರತೀಯರೆಲ್ಲರೂ ಕೋಪಗೊಂಡಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ. ಶುಕ್ರವಾರ ಬೆಳಗ್ಗೆ ಭಯೋತ್ಪಾದಕರೊಂದಿಗಿನ ಎನ್‌ಕೌಂಟರ್‌ನಲ್ಲಿ 5 ಭಾರತೀಯ ಸೈನಿಕರು ಹುತಾತ್ಮರಾದ ಬಳಿಕ ಕೇಂದ್ರ ಸರ್ಕಾರದ ವಿರುದ್ಧ ಎಎಪಿ ಟ್ವಿಟ್ನ ಮೂಲಕ ಮಾತಿನ ದಾಳಿ ನಡೆಸಿದೆ.
ಇದನ್ನೂ ಓದಿ:ರಾಜೌರಿಯಲ್ಲಿ ಸೇನೆ ದಾಳಿಗೆ ಉಗ್ರರ ಪ್ರತಿ ದಾಳಿ: ಐವರು ಯೋಧರು ಹುತಾತ್ಮ, ಇಬ್ಬರು ಉಗ್ರರನ್ನು ಹೊಡೆದುರುಳಿಸಿದ ಸೇನೆ