ಪಣಜಿ(ಗೋವಾ): ಗೋವಾ ವಿಧಾನಸಭೆ ಚುನಾವಣೆಗೆ ಭಾರತೀಯ ಜನತಾ ಪಾರ್ಟಿ ಅಭ್ಯರ್ಥಿಗಳ ಹೆಸರು ಘೋಷಣೆ ಮಾಡಿದ್ದು, ರಿಲೀಸ್ ಆಗಿರುವ ಪಟ್ಟಿಯಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಮಾಜಿ ರಕ್ಷಣಾ ಸಚಿವ ದಿ. ಮನೋಹರ್ ಪರಿಕ್ಕರ್ ಅವರ ಪುತ್ರ ಉತ್ಪಲ್ಗೆ ಟಿಕೆಟ್ ನಿರಾಕರಣೆ ಮಾಡಲಾಗಿದೆ. ಇದರ ಬೆನ್ನಲ್ಲೇ ಆಮ್ ಆದ್ಮಿ ಪಕ್ಷ ಸೇರಿಕೊಳ್ಳುವಂತೆ ಕೇಜ್ರಿವಾಲ್ ಆಹ್ವಾನ ನೀಡಿದ್ದಾರೆ.
ಗೋವಾ ವಿಧಾನಸಭೆ ಚುನಾವಣೆ ಫೆ. 14ರಂದು ನಡೆಯಲಿದ್ದು, 40 ಕ್ಷೇತ್ರಗಳ ಪೈಕಿ 34 ಸ್ಥಾನಗಳಿಗಾಗಿ ಬಿಜೆಪಿ ಅಭ್ಯರ್ಥಿಗಳ ಹೆಸರನ್ನು ಫೈನಲ್ ಮಾಡಿ, ಪಟ್ಟಿ ಪ್ರಕಟಿಸಿದೆ. ಆದರೆ, ಪಣಜಿ ಕ್ಷೇತ್ರದಿಂದ ಕಣಕ್ಕಿಳಿಯುವುದಾಗಿ ಇಂಗಿತ ವ್ಯಕ್ತಪಡಿಸಿದ್ದ ಮಾಜಿ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ಅವರ ಮಗ ಉತ್ಪಲ್ಗೆ ಟಿಕೆಟ್ ನಿರಾಕರಿಸಿ ಹಾಲಿ ಶಾಸಕನಿಗೆ ಮಣೆ ಹಾಕಲಾಗಿದೆ.
ಇದರ ಬೆನ್ನಲ್ಲೇ ಟ್ವೀಟ್ ಮಾಡಿರುವ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಪರಿಕ್ಕರ್ ಕುಟುಂಬದೊಂದಿಗೆ ಬಿಜೆಪಿ ಯೂಸ್ ಆ್ಯಂಡ್ ಥ್ರೋ ನೀತಿ (use-and-throw policy) ಅಳವಡಿಸಿಕೊಂಡಿದ್ದು, ಇದರಿಂದ ಗೋವಾ ಜನರು ದುಃಖಿತರಾಗಿದ್ದಾರೆ. ಮನೋಹರ್ ಪರಿಕ್ಕರ್ ಜೀ ಅವರ ಬಗ್ಗೆ ನನಗೆ ಯಾವಾಗಲೂ ಗೌರವವಿದೆ. ಉತ್ಪಲ್ ಪರಿಕ್ಕರ್ ಎಎಪಿ ಸೇರಿಕೊಂಡು ಗೋವಾ ಚುನಾವಣೆಯಲ್ಲಿ ಸ್ಪರ್ಧಿಸುವುದಾದರೆ ಸ್ವಾಗತಿಸುತ್ತೇವೆ ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.
ಇದನ್ನೂ ಓದಿರಿ:ಅತ್ಯಾಚಾರಿಗಳು, ಅಪರಾಧಿಗಳಿಗೆ ಟಿಕೆಟ್ ಕೊಡುವುದಾದ್ರೆ ನನ್ನಂಥ ಶುದ್ಧ ವ್ಯಕ್ತಿಗೇಕಿಲ್ಲ?: ಮನೋಹರ್ ಪರಿಕ್ಕರ್ ಪುತ್ರ
ಕಳೆದ ಕೆಲ ದಿನಗಳ ಹಿಂದೆ ಗೋವಾ ವಿಧಾನಸಭೆ ಚುನಾವಣೆಯಲ್ಲಿ ತನಗೆ ಟಿಕೆಟ್ ನೀಡದ ನಿರ್ಧಾರವನ್ನು ಪ್ರಶ್ನಿಸಿರುವ ಅವರು, ಪಕ್ಷವು ಪ್ರಶ್ನಾರ್ಹ, ಕಳಂಕಿತ ಅಭ್ಯರ್ಥಿಗಳಿಗೆ ಟಿಕೆಟ್ ನೀಡ್ತಿದೆ ಎಂದು ಆರೋಪಿಸಿದ್ದರು. ಪಣಜಿ ಕ್ಷೇತ್ರದಿಂದ ಅತ್ಯಾಚಾರಿಗಳು, ಕ್ರಿಮಿನಲ್ಗಳಿಗೆ ಟಿಕೆಟ್ ನೀಡಬಹುದಾಗಿದೆ, ಆದರೆ ನನ್ನಂತಹ ಶುದ್ಧ ವ್ಯಕ್ತಿಗೆ ಏಕೆ ಟಿಕೆಟ್ ನೀಡುತ್ತಿಲ್ಲ? ಎಂದು ಕೋಪಗೊಂಡಿದ್ದರು. ಜೊತೆಗೆ ಬಿಜೆಪಿ ಟಿಕೆಟ್ ನೀಡಲು ನಿರಾಕರಿಸಿದರೆ ತಾನು ಸ್ವತಂತ್ರವಾಗಿ ಸ್ಪರ್ಧಿಸುವುದಾಗಿಯೂ ಅವರು ತಿಳಿಸಿದ್ದಾರೆ.