ನವದೆಹಲಿ:ಇತ್ತೀಚೆಗೆ ಕೇಂದ್ರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳ ವಿರುದ್ಧ ರೈತರ ಪ್ರತಿಭಟನೆ ಕುರಿತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಪಂಜಾಬ್ ಸಿಎಂ ಅಮರೀಂದರ್ ಸಿಂಗ್ ಟ್ವಿಟರ್ ವಾರ್ ನಡೆಸಿದ್ದಾರೆ.
ಭಾನುವಾರ ಚಂಡೀಗಢದಲ್ಲಿ ನಡೆಸಿದ ಮಾಧ್ಯಮಗೋಷ್ಟಿ ವೇಳೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಘೋಷಣೆಯನ್ನು ಉದ್ದೇಶಿಸಿ ಟ್ವೀಟ್ ಮಾಡಿರುವ ಪಂಜಾಬ್ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಅದು 'ನಾಟಕೀಯ' ಎಂದು ಟೀಕಿಸಿದ್ದಾರೆ.
ಸಿಂಗ್ ಅವರ ಕಾಮೆಂಟ್‌ಗಳಿಗೆ ಪ್ರತಿಕ್ರಿಯಿಸಿದ ದೆಹಲಿ ಸಿಎಂ ಕೇಜ್ರಿವಾಲ್, "ನಿಮ್ಮ ಮಗನನ್ನು ಇಡಿ (ಜಾರಿ ನಿರ್ದೇಶನಾಲಯ)ದಿಂದ ರಕ್ಷಿಸಲು ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಾ" ಎಂದು ಆರೋಪಿಸಿದ್ದಾರೆ.
ನಾನು ಮೊದಲಿನಿಂದಲೂ ರೈತರೊಂದಿಗೆ ಇದ್ದೇನೆ. ದೆಹಲಿಯ ಕ್ರೀಡಾಂಗಣಗಳನ್ನು ಜೈಲುಗಳನ್ನಾಗಿ ಮಾಡಲು ನಾನು ಬಿಡಲಿಲ್ಲ. ನಾನು ಕೇಂದ್ರದ ವಿರುದ್ಧ ಹೋರಾಟ ಮಾಡಿದ್ದೇನೆ. ರೈತರ ಸೇವಾದಾರನಾಗಿ ನಾನು ಸೇವೆ ಸಲ್ಲಿಸುತ್ತಿದ್ದೇನೆ. ಆದ್ರೆ ನೀವು ನಿಮ್ಮ ಮಗನನ್ನು ಉಳಿಸಲು ಕೇಂದ್ರದೊಂದಿಗೆ ಒಪ್ಪಂದ ಮಾಡಿಕೊಂಡಿದ್ದೀರಿ, ರೈತರ ಆಂದೋಲನವನ್ನು ನೀವು ನಿರಾಕರಿಸಿದ್ದೀರಿ. ಏಕೆ? ಎಂದು ಕೇಜ್ರಿವಾಲ್ ಹಿಂದಿಯಲ್ಲಿ ಟ್ವೀಟ್ ಮೂಲಕ ಪ್ರಶ್ನಿಸಿದ್ದಾರೆ. ಟ್ವೀಟ್ ಜೊತೆಗೆ, ಅಮರೀಂದರ್ ಸಿಂಗ್ ಅವರ ಹೇಳಿಕೆಯ ಕುರಿತು ಸುದ್ದಿಯ ಲೇಖನವನ್ನೂ ಟ್ಯಾಗ್ ಮಾಡಿದ್ದಾರೆ.
ಕೇಜ್ರಿವಾಲ್ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕ್ಯಾ. ಸಿಂಗ್, ಇಡಿ ಬಗ್ಗೆ ತಾನು ತಲೆಕೆಡಿಸಿಕೊಳ್ಳುವುದಿಲ್ಲ. ಆದ್ರೆ, ಕೇಜ್ರಿವಾಲ್ "ತನ್ನ ಆತ್ಮವನ್ನು ರಾಜಕೀಯ ಉದ್ದೇಶಗಳಿಗಾಗಿ ಮಾರಿಕೊಳ್ಳುತ್ತಿದ್ದಾರೆ'' ಎಂದು ಆರೋಪಿಸಿ ರಿಟ್ವೀಟ್ ಮಾಡಿದ್ದಾರೆ.
ಪಂಜಾಬಿಗರಿಗೆ ತಿಳಿದಿರುವಂತೆ, ನಾನು ಇ.ಡಿ. ಅಥವಾ ಇತರ ಪ್ರಕರಣಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ, ನೀವು ನಿಮ್ಮ ರಾಜಕೀಯ ಉದ್ದೇಶಗಳನ್ನು ಪೂರೈಸಿದರೆ ನಿಮ್ಮ ಆತ್ಮವನ್ನು ಸಹ ಮಾರಾಟ ಮಾಡುತ್ತೀರಿ. ನಿಮ್ಮ ನಾಟಕಗಳಿಂದ ರೈತರನ್ನು ಕರೆದೊಯ್ಯಲಾಗುವುದು ಎಂದು ನೀವು ಭಾವಿಸಿದರೆ, ಅದು ನಿಮ್ಮ ತಪ್ಪು ಕಲ್ಪನೆ ಎಂದು ಕ್ಯಾ. ಸಿಂಗ್ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ:ಕೊಕೈನ್ ಜಾಲ ಹರಡಿದ್ದ ಪ್ರಮುಖ ಕಿಂಗ್ ಪಿನ್ ಬಂಧನ