ನವದೆಹಲಿ: ದೇಶದಲ್ಲಿ ಮತ್ತೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿದ್ದು ಕೇಂದ್ರ ಆರೋಗ್ಯ ಸಚಿವಾಲಯ ಕಳವಳ ವ್ಯಕ್ತಪಡಿಸಿದೆ. ಜೊತೆಗೆ, ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಸೋಂಕು ಪ್ರಕರಣಗಳನ್ನು ಸೂಕ್ಷ್ಮವಾಗಿ ಗಮನಿಸಿ ಕಟ್ಟೆಚ್ಚರ ವಹಿಸುವಂತೆ ತಿಳಿಸಿದೆ.
ವಿವಿಧ ರಾಜ್ಯಗಳಿಂದ ಸೋಂಕು ವರದಿಯ ಮಾದರಿಗಳನ್ನು ಸಂಗ್ರಹಿಸಲಾಗಿದೆ. ವೈರಸ್ ರೂಪಾಂತರಗಳನ್ನು ಖಚಿತಪಡಿಸಲು ಜೀನೋಮ್ ಸೀಕ್ವೆನ್ಸಿಂಗ್ ನಡೆಸಲಾಗುತ್ತಿದೆ ಎಂದು ಆರೋಗ್ಯ ಆರೋಗ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಲಸಿಕೆ ಪಡೆದ ನಂತರವೂ ಜನರು ಸೋಂಕಿಗೆ ತುತ್ತಾಗುತ್ತಿದ್ದಾರೆ. ಕೋವಿಡ್ ವೈರಸ್ ಲಸಿಕೆ ಒದಗಿಸುವ ರಕ್ಷಣಾತ್ಮಕ ತಡೆಗೋಡೆಯನ್ನು ಭೇದಿಸುತ್ತಿರುವುದು ಇದಕ್ಕೆ ಕಾರಣವಾಗಿದೆ. ಇಂಥ ಸೋಂಕುಗಳು ಈ ಹಿಂದೆ ನಿರೀಕ್ಷಿಸಿದ್ದಕ್ಕಿಂತ ಹೆಚ್ಚಾಗಿ ಕಂಡು ಬರುತ್ತಿವೆ. ಡೆಲ್ಟಾ ರೂಪಾಂತರದ ಪ್ರಾಬಲ್ಯದಿಂದಾಗಿ ಹೆಚ್ಚಾಗುತ್ತಿರುವ ಅನುಮಾನವಿದೆ. ಆದರೆ ಲಸಿಕೆ ಹಾಕಿದ ಜನರಲ್ಲಿ ಸೋಂಕು ಪ್ರಮಾಣ ಬಹಳ ವಿರಳ ಮತ್ತು ಸಾಮಾನ್ಯವಾಗಿ ಸೌಮ್ಯ ಅಥವಾ ಯಾವುದೇ ರೋಗಲಕ್ಷಣಗಳನ್ನು ಉಂಟು ಮಾಡುವುದಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ.