ಉತ್ತರಾಖಂಡ: ಕೊರೊನಾ ಸೋಂಕು ಭೀತಿಯಿಂದ ಪುರಾಣ ಪ್ರಸಿದ್ಧ ಹಿಂದೂಗಳ ಪವಿತ್ರ ದೇಗುಲ ಕೇದಾರನಾಥ ದೇವಾಲಯವನ್ನು ಮುಚ್ಚಲಾಗಿತ್ತು. ಆದರೆ ಇಂದು ಮುಂಜಾನೆ 5 ಗಂಟೆಗೆ ದೇವಾಲಯದ ಬಾಗಿಲು ತೆರೆಯಲಾಗಿದೆ. ಮುಂದಿನ 6 ತಿಂಗಳ ಕಾಲ ದೇವಸ್ಥಾನ ತೆರೆದಿದ್ದರೂ ಸಹ ಭಕ್ತರಿಗೆ ಪ್ರವೇಶಕ್ಕೆ ನಿರ್ಬಂಧವಿದೆ.
ವೈದಿಕ ಸ್ತೋತ್ರಗಳು ಮತ್ತು ಧಾರ್ಮಿಕ ಪೂಜೆ- ಪುನಸ್ಕಾರದ ಮುಖೇನ ದೇಗುಲದ ಬಾಗಿಲು ತೆರೆಯಲಾಗಿದೆ. ರಿಷಿಕೇಶದ ನಿವಾಸಿ ಸೌರಭ್ ಕಲ್ರಾ ಅವರ ಸಹಯೋಗದೊಂದಿಗೆ ಕೇದಾರ್ನಾಥ ದೇವಾಲಯವನ್ನು 11 ಕ್ವಿಂಟಲ್ ಹೂವುಗಳಿಂದ ಆಕರ್ಷಕವಾಗಿ ಅಲಂಕರಿಸಲಾಗಿದೆ. ಈ ವೇಳೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನುಜ್ ಗೋಯಲ್, ನಾಯಬ್ ತಹಶೀಲ್ದಾರ್ ಜಯಬೀರ್ ರಾಮ್ ಬಧಾನಿ ಉಪಸ್ಥಿತರಿದ್ದರು.
ಕೊರೊನಾ ಸೋಂಕಿನಿಂದಾಗಿ ಚಾರ್ಧಾಮ್ ಯಾತ್ರೆಯನ್ನು ಮುಂದೂಡಲಾಗಿತ್ತು. ಈ ಬಳಿಕ ಕೇದಾರನಾಥ ಭಗವಾನ್ ಚಾರಣವು ಈ ಬಾರಿಯೂ ಸರಳತೆಯಿಂದ ಪ್ರಾರಂಭವಾಗಿದೆ. ಈ ಸಮಯದಲ್ಲಿ, ಕೆಲವೇ ಕೆಲವು ಯಾತ್ರಿ ಪುರೋಹಿತರಿಗೆ ಮಾತ್ರ ಕೇದಾರನಾಥ ಧಾಮಕ್ಕೆ ಭೇಟಿ ನೀಡಲು ಅವಕಾಶ ನೀಡಲಾಗಿದೆ.
ಇನ್ನು ದೇವಾಲಯ ಇಂದು ತೆರೆದಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ತಿರಥ್ ಸಿಂಗ್ ರಾವತ್ ಅವರು, ಜನರು ತಮ್ಮ ತಮ್ಮ ಮನೆಗಳಲ್ಲಿ ಪೂಜೆ ಸಲ್ಲಿಸುವಂತೆ ಮನವಿ ಮಾಡಿದ್ದಾರೆ.