ಡೆಹ್ರಾಡೂನ್, ಉತ್ತರಾಖಂಡ: ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ರುದ್ರಪ್ರಯಾಗ ಜಿಲ್ಲೆಯ ಕೇದಾರನಾಥ ಧಾಮದಲ್ಲಿ ಸಂಭವಿಸಿದ ಭೂಕುಸಿತದಲ್ಲಿ 13 ಜನರು ನಾಪತ್ತೆಯಾಗಿದ್ದಾರೆ. ಕೇದಾರನಾಥ ದೇವಸ್ಥಾನದ ಪ್ರಮುಖ ರಸ್ತೆಯಾದ ಗೌರಿಕುಂಡ್‌ನಲ್ಲಿ ಈ ಘಟನೆ ನಡೆದಿದೆ. ಹಠಾತ್ ಭೂಕುಸಿತದಿಂದ ಮೂರು ಸ್ಥಳೀಯ ಅಂಗಡಿಗಳು ನಾಶವಾಗಿವೆ. ಇದರಿಂದ ಅದರಲ್ಲಿ ಮಲಗಿದ್ದ ಒಂದೇ ಕುಟುಂಬದ ಏಳು ಮಂದಿ ಸೇರಿ ಒಟ್ಟು 13 ಮಂದಿ ನಾಪತ್ತೆಯಾಗಿದ್ದಾರೆ. ಗುರುವಾರ ರಾತ್ರಿ ಈ ಘಟನೆ ನಡೆದಿದೆ.
ಅಪಘಾತದ ಬಗ್ಗೆ ಮಾಹಿತಿ ಪಡೆದ ಅಧಿಕಾರಿಗಳು ತಕ್ಷಣ ಸ್ಥಳಕ್ಕೆ ಧಾವಿಸಿದರು. ತಕ್ಷಣವೇ ಪರಿಹಾರ ಕ್ರಮಗಳನ್ನು ಕೈಗೊಳ್ಳಲಾಯಿತು. ಆದರೆ, ಭಾರೀ ಮಳೆಯಿಂದ ಪರಿಹಾರ ಕಾರ್ಯಕ್ಕೆ ಅಡ್ಡಿಯಾಗುತ್ತಿದೆ. ಸಂತ್ರಸ್ತರು ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಬಲಿಯಾದವರಲ್ಲಿ ಹೆಚ್ಚಿನವರು ನೇಪಾಳ ಮೂಲದವರು ಎಂದು ಸ್ಥಳೀಯರು ಹೇಳಿದ್ದಾರೆ.
ಇವರೆಲ್ಲ ಇಲ್ಲೇ ಅಂಗಡಿಗಳನ್ನು ಇಟ್ಟುಕೊಂಡು ಜೀವನ ನಡೆಸುತ್ತಿರುವುದು ಬಯಲಾಗಿದೆ. ಗುರುವಾರ ರಾತ್ರಿಯಿಂದಲೇ ಪರಿಹಾರ ಕಾರ್ಯಗಳು ನಡೆಯುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ತಿಳಿದು ಬಂದಿದೆ. ಸಂತ್ರಸ್ತರು ಮಂದಾಕಿನಿ ನದಿಯಲ್ಲಿ ಕೊಚ್ಚಿ ಹೋಗಿರಬಹುದು ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಒಂದೇ ಕುಟುಂಬದಲ್ಲಿ ಏಳು ಜನ ನಾಪತ್ತೆ: ನಾಪತ್ತೆಯಾದವರಲ್ಲಿ ಅಮರ್ ಬೋಹ್ರಾ, ಅವರ ಪತ್ನಿ ಅನಿತಾ ಬೊಹ್ರಾ, ಅವರ ಪುತ್ರಿಯರಾದ ರಾಧಿಕಾ ಬೊಹ್ರಾ, ಪಿಂಕಿ ಬೊಹ್ರಾ, ಮಕ್ಕಳಾದ ಪೃಥ್ವಿ ಬೋಹ್ರಾ (7), ಜತಿಲ್ (6) ಮತ್ತು ವಕೀಲ್ (3) ಇದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅವರ ಜೊತೆಯಲ್ಲಿ ವಿನೋದ್ (26), ಮುಲಾಯಂ (25), ಆಶು (23), ಪ್ರಿಯಾಂಶು ಚಮೋಲಾ (18) ಮತ್ತು ರಣಬೀರ್ ಸಿಂಗ್ (28) ಸಹ ಇದ್ದರು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ.