ಡೆಹರಡೂನ್ (ಉತ್ತರಾಖಂಡ): ಚಳಿಗಾಲದ ಆರು ತಿಂಗಳುಗಳ ಕಾಲ ಹಿಮದಿಂದ ಮುಚ್ಚಲಾಗಿದ್ದ ಕೇದಾರನಾಥ ದೇವಸ್ಥಾನದ ಬಾಗಿಲು ಇಂದು ಬೆಳಗ್ಗೆ ತೆರೆಯಲಾಗಿದೆ. 6 ಗಂಟೆ 20ನಿಮಿಷಕ್ಕೆ ವೇದಘೋಷದೊಂದಿಗೆ ಕೇದಾರನಾಥ ಧಾಮದ ಬಾಗಿಲು ಭಕ್ತರ ದರ್ಶನಕ್ಕಾಗಿ ತೆರೆಯಲಾಯಿತು. ಈ ವೇಳೆ ಹರಹರ ಮಹಾದೇವ್ ಎಂಬ ಘೋಷಣೆ ಮತ್ತು ದೈವ ಕೀರ್ತನೆಗಳು ಕೇದಾರ್ ಧಾಮ್‌ನಲ್ಲಿ ಪ್ರತಿಧ್ವನಿಸಿದವು. ಉತ್ತರಾಖಂಡ ಸಿಎಂ ಪುಷ್ಕರ್ ಸಿಂಗ್ ಧಾಮಿ ಕೂಡ ಕೇದಾರ್ ಧಾಮದಲ್ಲಿ ಹಾಜರಿದ್ದು, ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಸಾಕ್ಷಿಯಾದರು. ಕೇದಾರನಾಥ ದ್ವಾರಗಳನ್ನು ತೆರೆಯುವ ಸಂದರ್ಭದಲ್ಲಿ, ಮೊದಲ ದಿನ ವಿಶೇಷ ಪ್ರಾರ್ಥನೆಗಳನ್ನು ಸಲ್ಲಿಸಲಾಯಿತು.
ತಣ್ಣನೆಯ ವಾತಾವರಣದ ನಡುವೆ ಇಂದು ಬೆಳಗ್ಗೆಯಿಂದಲೇ ಕೇದಾರಧಾಮದ ಬಾಗಿಲು ತೆರೆಯುವ ಪ್ರಕ್ರಿಯೆ ಆರಂಭವಾಗಿತ್ತು. ಸಡಗರದ ನಡುವೆ ಧಾರ್ಮಿಕ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಕೇದಾರನಾಥ್ ಪಂಚಮುಖಿ ಭೋಗ್ ವಿಗ್ರಹ, ಚಾಲ್ ಉತ್ಸವ ವಿಗ್ರಹಗಳನ್ನ ಡೋಲಿಯಲ್ಲಿ ಇರಿಸಿ ರಾವಲ್ ನಿವಾಸದಿಂದ ದೇವಾಲಯದ ಆವರಣಕ್ಕೆ ತರಲಾಯಿತು. ಈ ವೇಳೆ ದಾರಿ ಉದ್ದಕ್ಕೂ ಭಕ್ತರ ಹರಹರ ಮಹಾದೇವ್ ಎಂಬ ಘೋಷಣೆಗಳು ಮೊಳಗಿದವು. ಇದಾದ ಬಳಿಕ ಸಿಎಂ ಪುಷ್ಕರ್ ಸಿಂಗ್ ಧಾಮಿ, ಬದರಿನಾಥ್ ಕೇದಾರನಾಥ್ ಮಂದಿರ ಸಮಿತಿ ಪದಾಧಿಕಾರಿಗಳು ಹಾಗೂ ಆಡಳಿತ ಮಂಡಳಿಯ ಸಮ್ಮುಖದಲ್ಲಿ ಕೇದಾರನಾಥ ದೇವಸ್ಥಾನದ ಮಹಾದ್ವಾರ ತೆರೆಯಲಾಯಿತು.
ಈ ಶುಭ ಸಮಯದಲ್ಲಿ ಕೇದಾರನಾಥ ದೇವಸ್ಥಾನದ ಮುಂದೆ ಹೆಚ್ಚಿನ ಸಂಖ್ಯೆಯ ಭಕ್ತರು ಸೇರಿದ್ದರು. ಕೇದಾರನಾಥ ದ್ವಾರಗಳನ್ನು ತೆರೆದ ನಂತರ, ಭಕ್ತರು ಕೇದಾರೇಶ್ವರನ ದರ್ಶನ ಪಡೆದರು. ಕೇದಾರನಾಥ್ ದೇವಸ್ಥಾನದ ಮಹಾದ್ವಾರ ತೆರೆಯುವ ಮುನ್ನ 23 ಕ್ವಿಂಟಾಲ್ ವಿವಿಧ ಹೂವುಗಳಿಂದ ಇಡೀ ದೇವಸ್ಥಾನವನ್ನು ಅಲಂಕಾರ ಮಾಡಲಾಗಿತ್ತು. ಹವಾಮಾನ ವೈಪರೀತ್ಯದ ನಡುವೆಯೂ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೇದಾರನಾಥ ಧಾಮಕ್ಕೆ ಆಗಮಿಸಿದ್ದಾರೆ. ಇನ್ನು ಕೇದಾರನಾಥ ಧಾಮದಲ್ಲಿ ಹಿಮಪಾತವು ಆಗುತ್ತಿದೆ. ಅಲ್ಲದೇ ಮುಂದಿನ ಕೆಲವು ದಿನಗಳಲ್ಲಿ ಮಳೆ ಮತ್ತು ಹಿಮಪಾತ ಆಗುವ ಬಗ್ಗೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ಸಹ ನೀಡಿದೆ. ಇದರ ನಡುವೆಯೇ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಕೇದಾರಕ್ಷೇತ್ರಕ್ಕೆ ಆಗಮಿಸಿದ್ದಾರೆ.