ಹೈದರಾಬಾದ್(ತೆಲಂಗಾಣ) :ಯುದ್ಧ ಪೀಡಿತ ಉಕ್ರೇನ್‌ನಿಂದ ಭಾರತಕ್ಕೆ ಮರಳಿರುವ ವೈದ್ಯಕೀಯ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್, ಇಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ದೇಶದ ವೈದ್ಯಕೀಯ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿಸುವಂತೆ ಒತ್ತಾಯಿಸಿದ್ದಾರೆ.
ಉಕ್ರೇನ್‌ನಲ್ಲಿನ ವಿವಿಧ ವೈದ್ಯಕೀಯ ಕಾಲೇಜುಗಳಲ್ಲಿ ಓದುತ್ತಿದ್ದ ಭಾರತೀಯ ವಿದ್ಯಾರ್ಥಿಗಳು ಉಕ್ರೇನ್‌ನಲ್ಲಿ ಹಠಾತ್ ಯುದ್ಧದಿಂದಾಗಿ ಶಿಕ್ಷಣವನ್ನು ಮೊಟಕುಗೊಳಿಸಿ ತೀವ್ರ ಸಂಕಷ್ಟದ ಪರಿಸ್ಥಿತಿಯಲ್ಲಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಉಕ್ರೇನ್‌ನಲ್ಲಿ ವೈದ್ಯಕೀಯ ಶಿಕ್ಷಣವನ್ನು ಪಡೆಯಲು ಸಾಕಷ್ಟು ಸಮಯವನ್ನು ಮೀಸಲಿಟ್ಟು ಹಾಗೂ ದೊಡ್ಡ ಮೊತ್ತದ ಹಣವನ್ನು ಖರ್ಚು ಮಾಡಿದ ಈ ವಿದ್ಯಾರ್ಥಿಗಳ ಭವಿಷ್ಯವನ್ನು ಅಪಾಯಕ್ಕೆ ಸಿಲುಕಿಸಿದೆ. ಇವರೆಲ್ಲಾ ಅಪೂರ್ಣವಾಗಿ ಉಳಿಯುವ ಸಾಧ್ಯತೆಯಿದೆ ಎಂದು ಕೆಸಿಆರ್ ಪ್ರಧಾನಿಗೆ ಬರೆದ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
20,000ಕ್ಕೂ ಹೆಚ್ಚು ಭಾರತೀಯ ವಿದ್ಯಾರ್ಥಿಗಳು ಯುದ್ಧದ ಕಾರಣದಿಂದಾಗಿ ಉಕ್ರೇನ್‌ನಿಂದ ಸ್ಥಳಾಂತರಗೊಂಡಿದ್ದಾರೆ. ಇವರಲ್ಲಿ ಹೆಚ್ಚಿನವರು ಮಧ್ಯಮ ವರ್ಗದ ಕುಟುಂಬಗಳಿಂದವರಾಗಿದ್ದು, ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸುವ ಯಾವುದೇ ಭರವಸೆಯಿಲ್ಲದೆ ತಮ್ಮ ಇಡೀ ಜೀವನದ ಗಳಿಕೆಯನ್ನು ಕಳೆದುಕೊಳ್ಳಲಿದ್ದಾರೆ. ತೆಲಂಗಾಣದ 700ಕ್ಕೂ ಹೆಚ್ಚು ವಿದ್ಯಾರ್ಥಿಗಳು ತಮ್ಮ ವೈದ್ಯಕೀಯ ಶಿಕ್ಷಣವನ್ನು ಪೂರ್ಣಗೊಳಿಸದೆ ಉಕ್ರೇನ್‌ನಿಂದ ಹಿಂದಿರುಗಿದ್ದಾರೆ ಎಂದು ಕೆಸಿಆರ್ ಹೇಳಿದ್ದಾರೆ.