ಕರ್ನಾಟಕ

karnataka

ETV Bharat / bharat

ಬಿಆರ್​ಎಸ್​ ಮುಳುಗುತ್ತಿರುವ ಹಡಗು ಎನ್ನುವುದು ಕೆಸಿಆರ್​ಗೆ ಅರ್ಥವಾಗಿದೆ: ಪ್ರಧಾನಿ ಮೋದಿ ಟಾಂಗ್​ - ತೆಲಂಗಾಣದಲ್ಲಿ ಚುನಾವಣಾ ಪ್ರಚಾರ

PM Modi Road show in Telangana: ಬಿಜೆಪಿ ತೆಲಂಗಾಣವನ್ನು ಬಿಆರ್​ಎಸ್​ ಕಪಿಮುಷ್ಠಿಯಿಂದ ಹೊರತರಲಿದೆ. ತೆಲಂಗಾಣದ ಅಭಿವೃದ್ಧಿಗಾಗಿ ಈ ಬಾರಿ ಬಿಜೆಪಿಗೆ ಮತ ಹಾಕಿ ಎಂದು ಪ್ರಧಾನಿ ಮತದಾರರನ್ನು ಕೇಳಿಕೊಂಡರು.

Prime Minister Narendra Modi
ಪ್ರಧಾಣಿ ನರೇಂದ್ರ ಮೋದಿ

By ETV Bharat Karnataka Team

Published : Nov 27, 2023, 7:46 PM IST

ಕರೀಂನಗರ (ತೆಲಂಗಾಣ): ಬಿಆರ್​ಎಸ್​ ಮುಳುಗುವ ಹಡಗು ಎಂಬುದು ಕೆಸಿಆರ್​ಗೂ ಅರ್ಥವಾಗಿದೆ. ಹಾಗಾಗಿಯೇ ಅವರ ಕುಟುಂಬದ ಸದಸ್ಯರೆಲ್ಲರೂ ಈ ಚುನಾವಣೆಯಲ್ಲಿ ಗೆಲ್ಲಲು ಹರಸಾಹಸ ಪಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.

ಇಂದು ಪ್ರಧಾನಿ ಮೋದಿ ತೆಲಂಗಾಣದಲ್ಲಿ ಚುನಾವಣಾ ಪ್ರಚಾರದ ಭಾಗವಾಗಿ ಕರೀಂನಗರದ ಮಹಬೂಬಾಬಾದ್​ನಲ್ಲಿ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ಈಗಾಗಲೇ ಹಜೂರಬಾದ್​ನ ಜನರು ಸಿಎಂಗೆ ಟ್ರೇಲರ್​ ತೋರಿಸಿದ್ದು, ಈ ಬಾರಿಯ ಚುನಾವಣೆಯಲ್ಲಿ ಪೂರ್ತಿ ಸಿನಿಮಾ ತೋರಿಸಲಿದ್ದಾರೆ. ತೆಲಂಗಾಣದಲ್ಲಿ ಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ ಎಂದು ಪ್ರಧಾನಿ ವಿಶ್ವಾಸ ವ್ಯಕ್ತಪಡಿಸಿದರು.

ತೆಲಂಗಾಣ ರಾಜ್ಯಕ್ಕೆ ಹತ್ತು ವರ್ಷ ತುಂಬಿದೆ. ಮುಂದಿನ ಐದು ವರ್ಷಗಳು ತೆಲಂಗಾಣದ ಭವಿಷ್ಯಕ್ಕೆ ನಿರ್ಣಾಯಕವಾಗಿದೆ. ಮುಂದಿನ ಐದು ವರ್ಷಗಳಲ್ಲಿ ತೆಲಂಗಾಣ ದೇಶದಲ್ಲೇ ನಂಬರ್​ ಒನ್​ ಆಗಬೇಕು ಎಂದು ಹಾರೈಸಿದರು. ತೆಲಂಗಾಣದಲ್ಲಿ ಬಿಜೆಪಿ ಸರ್ಕಾರದ ಅವಶ್ಯಕತೆ ಇದೆ. ಅಭಿವೃದ್ಧಿ ಆಗಬೇಕಾದರೆ ಬಿಜೆಪಿಗೆ ಮತ ನೀಡಿ. ತೆಲಂಗಾಣದಲ್ಲಿ ಬದಲಾವಣೆಯ ಗಾಳಿ ಬೀಸುತ್ತಿದೆ. ಬದಲಾವಣೆಯಾಗುತ್ತಿರುವುದು ಸತ್ಯ ಎಂದರು.

ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ಜನತೆ ಬಿಆರ್​ಎಸ್​ ಹಾಗೂ ಕಾಂಗ್ರೆಸ್​ ಪಕ್ಷಗಳನ್ನು ಸೋಲಿಸುತ್ತಾರೆ. ಯಾಕೆಂದರೆ ಕಾಂಗ್ರೆಸ್​ ಹಾಗೂ ಬಿಆರ್​ಎಸ್​ ಸಾಧ್ಯವಾದ ರೀತಿಯಲ್ಲೆಲ್ಲ ಜನರನ್ನು ವಂಚಿಸಿವೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಪಿಎಫ್​ಐನಂತಹ ಭಯೋತ್ಪಾದಕ ಸಂಘಟನೆಗಳಿಗೆ ಉತ್ತೇಜನ ಸಿಗಲಿದೆ. ಅದು ನಡೆಯಬಾರದು ಎಂದರೆ ಈ ಬಾರಿ ಬಿಜೆಪಿಗೆ ಮತ ನೀಡಿ ಎಂದು ಹೇಳಿದರು.

ಬಿಜೆಪಿಯಿಂದ ಮಾತ್ರ ತೆಲಂಗಾಣದ ಪ್ರತಿಷ್ಠೆ ಹೆಚ್ಚಲು ಸಾಧ್ಯ. ತೆಲಂಗಾಣವನ್ನು ಬಿಆರ್​ಎಸ್​ ಕಪಿಮುಷ್ಠಿಯಿಂದ ಬಿಜೆಪಿ ಹೊರತರಲಿದೆ. ಆಡಳಿತ ಪಕ್ಷದ ಭ್ರಷ್ಟ ನಾಯಕರನ್ನು ಜೈಲಿಗೆ ಕಳುಹಿಸುವುದು ನಮ್ಮ ಪಕ್ಷದ ಸಂಕಲ್ಪ. ಕರೀಂನಗರವನ್ನು ಸ್ಮಾರ್ಟ್​ ಸಿಟಿಯನ್ನಾಗಿ ಅಭಿವೃದ್ಧಿಪಡಿಸಲು ಕೇಂದ್ರ ಸರ್ಕಾರ ಪ್ರಯತ್ನಿಸಿದರೂ, ಆ ಯೋಜನೆಯನ್ನು ಬಿಆರ್​ಎಸ್​ ಸರ್ಕಾರ ತಡೆ ಹಿಡಿದಿದೆ. ಕಾಳೇಶ್ವರಂ ಹೆಸರಿನಲ್ಲಿ ಕೆಸಿಆರ್​ 1 ಲಕ್ಷ ಕೋಟಿ ರೂಪಾಯಿ ದರೋಡೆ ಮಾಡಿರುವುದು ಇಡೀ ದೇಶಕ್ಕೆ ಗೊತ್ತಿದೆ ಎಂದು ಪ್ರಧಾನಿ ಆರೋಪಿಸಿದರು.

ಕೆಸಿಆರ್​ ಕುಟುಂಬ ಭ್ರಷ್ಟಾಚಾರ ಮಾಡಲೆಂದೇ ತೆಲಂಗಾಣವನ್ನು ತನ್ನ ಮುಷ್ಠಿಯಲ್ಲಿ ಇರಿಸಿಕೊಂಡಿದೆಯಾ? ಎಂದು ಪ್ರಶ್ನಿಸಿದ ಅವರು, ನೀರು, ಅನುದಾನ, ನೇಮಕಾತಿಗಳ ಬದಲು ಕೆಸಿಆರ್​ ಕಣ್ಣೀರು, ವಂಚನೆ, ನಿರುದ್ಯೋಗವನ್ನಷ್ಟೇ ನೀಡಿದ್ದಾರೆ. ಅದೇ ರೀತಿ ಕಾಂಗ್ರೆಸ್​ ಅನ್ನು ಕೂಡ ನಂಬಬೇಡಿ, ಯಾಕೆಂದರೆ ಒಂದು ಕಾಯಿಲೆಯ ಮದ್ದು, ಇನ್ನೊಂದು ಕಾಯಿಲೆಗೆ ಮದ್ದಲ್ಲ. ನೀರಾವರಿ ಹಗರಣದ ತಪ್ಪಿತಸ್ಥರನ್ನು ಜೈಲಿಗೆ ಕಳುಹಿಸಬೇಕಾ ಅಥವಾ ಕೆಸಿಆರ್​ ಸರ್ಕಾರಕ್ಕೆ ತಕ್ಕ ಪಾಠ ಕಲಿಸಬೇಕಾ? ಹಾಗಾದರೆ ಬಿಜೆಪಿಗೆ ಮತ ನೀಡಿ ಎಂದು ಕೇಳಿಕೊಂಡರು.

ಡಿ. 3 ರಂದು ಬಿಜೆಪಿ ಸರ್ಕಾರ ರಚನೆಯಾದ ಬಳಿಕ ಮದ್ಯ ಹಗರಣದ ತನಿಖೆ ಚುರುಕುಗೊಳ್ಳಲಿದೆ. ಮತ್ತೆ ಕಾಂಗ್ರೆಸ್​ ಸರ್ಕಾರ ರಚನೆಯಾದರೆ ರಾಜ್ಯವನ್ನು ಎಟಿಎಂ ಆಗಿ ಪರಿವರ್ತಿಸಲಿದೆ. ಕಾಂಗ್ರೆಸ್​ ಅಧಿಕಾರಕ್ಕೆ ಬಂದರೆ ಮತ್ತೆ ವಿನಾಶ ಶುರುವಾಗುತ್ತದೆ. ಮುಂದಿನ ಲೋಕಸಭಾ ಚುನಾವಣೆಯಲ್ಲೂ ಬಿಜೆಪಿ ಅಧಿಕಾರಕ್ಕೆ ಬರಬೇಕು. ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಯಾದರೆ ಅಭಿವೃದ್ಧಿ ವೇಗವಾಗಿ ಸಾಗಲಿದೆ. ಕಮಲಕ್ಕೆ ನೀಡುವ ಪ್ರತಿಯೊಂದು ಮತವೂ ನನ್ನ ಶಕ್ತಿಯನ್ನು ಹೆಚ್ಚಿಸಲಿದೆ ಎಂದು ಹೇಳಿದರು.

ಕರೀಂನಗರದ ಮಹಬೂಬಾಬಾದ್​ನಲ್ಲಿ ಚುನಾವಣಾ ರ‍್ಯಾಲಿ ಬಳಿಕ ಪ್ರಧಾನಿ ಮೋದಿ ಹೈದರಾಬಾದ್​ ತಲುಪಿದ್ದು, ಸಂಜೆ ಆರ್​ಟಿಸಿ ಕ್ರಾಸ್​ ರೋಡ್​ನಲ್ಲಿ ರೋಡ್​ ಶೋದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ:ಎಲ್ಲ ರಾಜ್ಯಗಳಲ್ಲಿ ನಾವೇ ಸರ್ಕಾರ ರಚಿಸುತ್ತೇವೆ ಎನ್ನುವ ವಿಶ್ವಾಸವಿದೆ: ಡಿ ಕೆ ಶಿವಕುಮಾರ್​

ABOUT THE AUTHOR

...view details