ಕರ್ನಾಟಕ

karnataka

ETV Bharat / bharat

'ಎನ್​ಡಿಎ ಕೂಟ ಸೇರಲು ಕೇಳಿದ್ದ ಸಿಎಂ ಕೆಸಿಆರ್​, ನಾನೇ ನಿರಾಕರಿಸಿದೆ': ತೆಲಂಗಾಣದಲ್ಲಿ ಪ್ರಧಾನಿ ಮೋದಿ ಸಂಚಲನಾತ್ಮಕ ಹೇಳಿಕೆ - KCR told me he wants to join NDA

ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ತೆಲಂಗಾಣಕ್ಕೆ ಭೇಟಿ ನೀಡಿದ್ದಾರೆ.

ತೆಲಂಗಾಣದಲ್ಲಿ ಪ್ರಧಾನಿ ಮೋದಿ
ತೆಲಂಗಾಣದಲ್ಲಿ ಪ್ರಧಾನಿ ಮೋದಿ

By ETV Bharat Karnataka Team

Published : Oct 3, 2023, 6:21 PM IST

Updated : Oct 3, 2023, 6:30 PM IST

ನಿಜಾಮಾಬಾದ್ (ತೆಲಂಗಾಣ):'ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್​ ರಾವ್​ ಅವರು ಎನ್‌ಡಿಎ ಕೂಟ ಸೇರಲು ಬಯಸುವುದಾಗಿ ಪ್ರಸ್ತಾಪಿಸಿದ್ದರು. ಆದರೆ ನಾನೇ ಮೈತ್ರಿಕೂಟಕ್ಕೆ ಸೇರಿಸಿಕೊಳ್ಳಲು ನಿರಾಕರಿಸಿದೆ'.. ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳ ಉದ್ಘಾಟನೆ, ಚಾಲನೆ ನೀಡಲು ತೆಲಂಗಾಣಕ್ಕೆ ಮಂಗಳವಾರ ಭೇಟಿ ನೀಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿರುವ ಸಂಚಲನಾತ್ಮಕ ಹೇಳಿಕೆ ಇದು.

ನಿಜಾಮಾಬಾದ್‌ನಲ್ಲಿ ಬಿಜೆಪಿಯಿಂದ ಇಂದು ಹಮ್ಮಿಕೊಂಡಿರುವ 'ಪ್ರಜಾ ಘರ್ಜನೆ' ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಗೆ ಐದು ವರ್ಷಗಳ ಅಧಿಕಾರ ನೀಡಿ. ಬಿಆರ್‌ಎಸ್ ಲೂಟಿ ಮಾಡಿದ್ದೆಲ್ಲವನ್ನೂ ಮತ್ತೆ ಜನರ ಮುಂದೆ ತಂದಿಡುವೆ. ಪ್ರಜಾಪ್ರಭುತ್ವದಲ್ಲಿ ವಂಶಪಾರಂಪರ್ಯವಾಗಿ ಅಧಿಕಾರ ಸಾಧ್ಯವಿಲ್ಲ ಎಂದು ಗುಡುಗಿದರು.

ಬಿಜೆಪಿ ನೇತೃತ್ವದ ಎನ್​ಡಿಎ ಕೂಟವನ್ನು ಸೇರುವುದಾಗಿ ಸಿಎಂ ಕೆಸಿಆರ್ ನನ್ನಲ್ಲಿ ಕೇಳಿಕೊಂಡಿದ್ದರು. ತಮ್ಮ ಪುತ್ರ ಕೆಟಿ ರಾಮರಾವ್​ ಅವರನ್ನು ಬೆಂಬಲಿಸಲು ಕೋರಿದ್ದರು. ಆದರೆ, ಕೆಸಿಆರ್‌ ಅವರ ಈ ಬೇಡಿಕೆಯನ್ನು ನಾನು ನಿರಾಕರಿಸಿದೆ. ನಿಜವಾದ ಆಡಳಿತಗಾರರಿಗೆ ಜನರೇ ಆಶೀರ್ವಾದ ಮಾಡಬೇಕು. ಬಿಆರ್​ಎಸ್​​ ಅನ್ನು ಎನ್​ಡಿಎ ಕೂಟದಲ್ಲಿ ಸೇರಿಸಿಕೊಳ್ಳಲಾಗಲ್ಲ ಎಂದು ಹೇಳಿದೆ. ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್​ ಮತ್ತು ಬಿಆರ್​ಎಸ್​ ವಿರುದ್ಧ ಹೋರಾಟ ನಡೆಸಲಿದೆ ಎಂದು ಹೇಳಿದರು.

ಪ್ರಧಾನಿ ಹೇಳಿದ ಮಾತುಗಳಿವು:'ಸಿಎಂ ಕೆಸಿಆರ್ ಮತ್ತು ನನ್ನ ಮಧ್ಯೆ ನಡೆದ ರಹಸ್ಯ ಸಂಭಾಷಣೆಯ ಮೊದಲ ಬಾರಿ ಬಹಿರಂಗ ಮಾಡುತ್ತಿದ್ದೇನೆ. ಎಲ್ಲರೂ ಇದನ್ನು ಎರಡೆರಡು ಬಾರಿ ಪರಿಶೀಲಿಸಿ. ನಾನು ಪ್ರತಿಶತ ನೂರರಷ್ಟು ಸತ್ಯವನ್ನು ಹೇಳುತ್ತಿದ್ದೇನೆ. ಅಂದು ಹೈದರಾಬಾದ್ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆ ಮುಗಿದಿತ್ತು. ಬಿಜೆಪಿ 48 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆಗ ಯಾರೊಬ್ಬರಿಗೂ ಬಹುಮತ ಬಂದಿರಲಿಲ್ಲ. ಮಹಾನಗರ ಪಾಲಿಕೆಯಲ್ಲಿ ಅಧಿಕಾರ ಸ್ಥಾಪನೆಗಾಗಿ ಕೆಸಿಆರ್ ಅವರಿಗೆ ನಮ್ಮ ಬೆಂಬಲ ಬೇಕಿತ್ತು.'

'ಆಗ ನಾನು ತೆಲಂಗಾಣಕ್ಕೆ ಭೇಟಿ ನೀಡಿದ್ದೆ. ಕೆಸಿಆರ್​ ಅವರೇ ನನ್ನನ್ನು ಸ್ವಾಗತಿಸಲು ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಹಾರ, ಶಾಲು ಹಾಕಿ ನನ್ನನ್ನು ಅವರು ಸ್ವಾಗತಿಸಿದರು. ಇದಾದ ಬಳಿಕ ಚುನಾವಣೆ ನಡೆಯಿತು. ಆಗ ಅವರು ನನ್ನನ್ನು ಭೇಟಿಯಾಗಲು ದೆಹಲಿಗೆ ಬಂದಿದ್ದರು. ಆ ವೇಳೆ 'ನಿಮ್ಮ ನಾಯಕತ್ವದಲ್ಲಿ ದೇಶ ಅಭಿವೃದ್ಧಿಯಾಗುತ್ತಿದೆ. ನಾವೂ (ಬಿಆರ್‌ಎಸ್) ಎನ್‌ಡಿಎ ಭಾಗವಾಗಲು ಬಯಸುತ್ತೇವೆ. ಎನ್‌ಡಿಎ ಸೇರುವುದಾಗಿ ಹೇಳಿದರು. ಇದಕ್ಕಾಗಿ ಹೈದರಾಬಾದ್ ಮುನ್ಸಿಪಲ್ ಚುನಾವಣೆಯಲ್ಲಿ ಬಿಜೆಪಿ ನಮಗೆ ಬೆಂಬಲ ನೀಡಬೇಕು ಎಂದು ತಮ್ಮ ಬೇಡಿಕೆಯನ್ನು ಮಂಡಿಸಿದರು. ಆದರೆ, ನಾನು ಅದಕ್ಕೆ ಪ್ರತಿಕ್ರಿಯಿಸಿ, ನಿಮ್ಮ ಈ ಬೇಡಿಕೆ ಈಡೇರುವುದಿಲ್ಲ. ನೀವು ಎನ್​ಡಿಎ ಸೇರಲು ಸಾಧ್ಯವಿಲ್ಲ ಎಂದು ಹೇಳಿದ್ದೆ' ಎಂದು ಅವರ ನಡುವೆ ನಡೆದ ಸಂಭಾಷಣೆಯ ವಿವರವನ್ನು ಮೋದಿ ನೀಡಿದರು.

ಇದನ್ನೂ ಓದಿ:ಯುಪಿಎ ಅವಧಿಯಲ್ಲಿ ಕಾಂಗ್ರೆಸ್​ನಲ್ಲೇ ಮಹಿಳಾ ಮೀಸಲಾತಿಗೆ ವಿರೋಧ ಇತ್ತು​: ಗುಲಾಂ ನಬಿ ಆಜಾದ್

Last Updated : Oct 3, 2023, 6:30 PM IST

ABOUT THE AUTHOR

...view details