ಮುಂಬೈ : ಭಾರತ್ ರಾಷ್ಟ್ರ ಸಮಿತಿ (ಬಿಆರ್‌ಎಸ್) ಸಂಚಾಲಕ ಮತ್ತು ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಏಪ್ರಿಲ್ 24 ರಂದು ಔರಂಗಾಬಾದ್‌ನಲ್ಲಿ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ತೆಲಂಗಾಣದಲ್ಲಿ ತಮ್ಮ ಸರ್ಕಾರದ ಸಾಧನೆಗಳು ಮತ್ತು ಅದನ್ನು ಇಡೀ ದೇಶದಲ್ಲಿ ಪುನರಾವರ್ತಿಸುವ ತಮ್ಮ ಯೋಜನೆಗಳನ್ನು ಕೆಸಿಆರ್ ಜನರ ಮುಂದೆ ಇಡಲಿದ್ದಾರೆ.
ಮುಖ್ಯಮಂತ್ರಿ ಕೆಸಿಆರ್ ಅವರು ತೆಲಂಗಾಣದಲ್ಲಿ ಕಳೆದ ಒಂಬತ್ತು ವರ್ಷಗಳಿಂದ ಜಾರಿಗೆ ತರುತ್ತಿರುವ ಯೋಜನೆಗಳು ಮತ್ತು ದೇಶದ ಉಳಿದ ಭಾಗಗಳಿಗೆ ತಮ್ಮ ದೃಷ್ಟಿಕೋನವನ್ನು ವಿವರಿಸಲಿದ್ದಾರೆ. ಔರಂಗಾಬಾದ್‌ನ ಪ್ರತಿಯೊಂದು ಮೂಲೆ ಮೂಲೆಯಿಂದ ಮತ್ತು ಸುತ್ತಮುತ್ತಲಿನ ಪಟ್ಟಣಗಳ ಜನರನ್ನು ಸಾರ್ವಜನಿಕ ಸಭೆಗೆ ಸೇರಿಸಲು ನಾವು ಯೋಜಿಸುತ್ತಿದ್ದೇವೆ ಎಂದು ಹಿರಿಯ ಬಿಆರ್‌ಎಸ್ ನಾಯಕ ಮತ್ತು ಆರ್ಮೂರ್ ಶಾಸಕ ಎ ಜೀವನ್ ರೆಡ್ಡಿ ಸೋಮವಾರ ಔರಂಗಾಬಾದ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ರೆಡ್ಡಿ ಅವರು ಜಹೀರಾಬಾದ್ ಸಂಸತ್ ಸದಸ್ಯ ಬಿಬಿ ಪಾಟೀಲ್ ಮತ್ತು ಪಕ್ಷದ ಇತರ ಹಿರಿಯ ನಾಯಕರೊಂದಿಗೆ ತೆಲಂಗಾಣ ಸರ್ಕಾರದ ಕಾರ್ಯಕ್ರಮಗಳು ಮತ್ತು ಯೋಜನೆಗಳನ್ನು ಹೈಲೈಟ್ ಮಾಡಲು ಔರಂಗಾಬಾದ್‌ನಲ್ಲಿ ಸ್ಕ್ರೀನ್ ಮತ್ತು ದೃಶ್ಯ ಉಪಕರಣಗಳನ್ನು ಅಳವಡಿಸಿದ ಏಳು ವಾಹನಗಳಿಗೆ ಹಸಿರು ನಿಶಾನೆ ತೋರಿಸಿದರು. ತೆಲಂಗಾಣ ಮಾದರಿಯ ಅಭಿವೃದ್ಧಿಯನ್ನು ದೇಶದ ಜನತೆಗೆ ವಿವರಿಸುವುದು ಈ ಅಭಿಯಾನದ ಉದ್ದೇಶವಾಗಿದೆ.
ಈ ವಾಹನಗಳು ಔರಂಗಾಬಾದ್ ಪೂರ್ವ, ಪಶ್ಚಿಮ, ಸೆಂಟ್ರಲ್, ವೈಜಾಪುರ, ಕನ್ನಡ್, ಗಂಗಾಪುರ ಮತ್ತು ಇತರ ಪ್ರದೇಶಗಳ ವಿವಿಧ ಕ್ಷೇತ್ರಗಳ ಗ್ರಾಮಗಳಲ್ಲಿ ಸಂಚರಿಸಲಿವೆ. ತೆಲಂಗಾಣದ ಜನರ ಜೀವನವನ್ನು ಪರಿವರ್ತಿಸುವ ವಿವಿಧ ಯೋಜನೆಗಳನ್ನು ಕೆಸಿಆರ್ ಸರ್ಕಾರ ಹೇಗೆ ಜಾರಿಗೆ ತಂದಿದೆ ಎಂಬ ಬಗ್ಗೆ ಸ್ಥಳೀಯ ಭಾಷೆಯಲ್ಲಿ ಈ ವಾಹನಗಳು ಜನರಿಗೆ ತಿಳಿಸಲಿವೆ ಎಂದು ಬಿಆರ್‌ಎಸ್ ಶಾಸಕರು ಹೇಳಿದರು.
ತೆಲಂಗಾಣದಲ್ಲಿ ಯೋಜನೆಗಳನ್ನು ಜಾರಿಗೊಳಿಸಲು ಸಾಧ್ಯವಾಗುವುದಾದರೆ ಅವೇ ಯೋಜನೆಗಳನ್ನು ಮಹಾರಾಷ್ಟ್ರದಲ್ಲಿಯೂ ಯಶಸ್ವಿಯಾಗಿ ಜಾರಿಗೊಳಿಸಬಹುದು ಎಂಬುದನ್ನು ಬಿಆರ್‌ಎಸ್ ಮುಖ್ಯಸ್ಥರು ಮಹಾರಾಷ್ಟ್ರದ ಜನರಿಗೆ ತಿಳಿಸಲಿದ್ದಾರೆ. ಔರಂಗಾಬಾದ್‌ನ ಆಮಖಾಸ್ ಮೈದಾನದಲ್ಲಿ ನಡೆಯುತ್ತಿರುವ ಸಭೆಯು ಮಹಾರಾಷ್ಟ್ರ ರಾಜಕೀಯಕ್ಕೆ ಪ್ರಮುಖ ತಿರುವು ನೀಡಲಿದೆ ಎಂದು ರೆಡ್ಡಿ ಹೇಳಿದರು. ಇದು ಮಹಾರಾಷ್ಟ್ರದಲ್ಲಿ ಕೆಸಿಆರ್ ಅವರ ಮೂರನೇ ಸಾರ್ವಜನಿಕ ಸಭೆಯಾಗಿದೆ. ಮೊದಲ ಸಭೆಯು ಫೆಬ್ರವರಿ 5 ರಂದು ನಾಂದೇಡ್‌ನ ಭೋಕರ್‌ನಲ್ಲಿ ನಡೆದಿತ್ತು. ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ಅನ್ನು ಬಿಆರ್‌ಎಸ್ ಆಗಿ ಪರಿವರ್ತಿಸಿದ ನಂತರ ತೆಲಂಗಾಣದ ಹೊರಗೆ ನಡೆದ ಮೊದಲ ರ್ಯಾಲಿ ಇದಾಗಿದೆ. ಎರಡನೇ ಸಭೆಯು ಮಾರ್ಚ್ 26 ರಂದು ಕಂದರ್-ಲೋಹಾದಲ್ಲಿ ನಡೆಯಿತು.
ಔರಂಗಾಬಾದ್ ರ್ಯಾಲಿಗೆ ಅನುಮತಿ ನಿರಾಕರಣೆ: ನಗರದ ಆಮಖಾಸ್ ಮೈದಾನದಲ್ಲಿ ಬಿಆರ್‌ಎಸ್ ರ್ಯಾಲಿಗೆ ಅನುಮತಿ ನೀಡಲು ಪೊಲೀಸ್ ಇಲಾಖೆ ನಿರಾಕರಿಸಿದೆ ಎನ್ನಲಾಗಿದೆ. ನಗರದ ಮಧ್ಯಭಾಗದಲ್ಲಿರುವ ಆಮಖಾಸ್ ಮೈದಾನ ಬಿಆರ್‌ಎಸ್ ರ್ಯಾಲಿ ನಡೆಸಲು ಸೂಕ್ತವಾಗಿಲ್ಲ ಎಂಬ ಕಾರಣ ನೀಡಿ ಪೊಲೀಸರು ಅನುಮತಿ ನಿರಾಕರಿಸಿದ್ದಾರೆ ಎನ್ನಲಾಗಿದೆ. ಮಿಲಿಂದ್ ಕಾಲೇಜ್ ಹತ್ತಿರ ಬೇಕಾದರೆ ರ‍್ಯಾಲಿ ನಡೆಸಿ ಎಂದು ಪೊಲೀಸರು ಹೇಳಿರುವುದಾಗಿ ವರದಿಯಾಗಿದೆ.
ಇದನ್ನೂ ಓದಿ :ದೇಶದಲ್ಲಿ ಪೋಸ್ಟ್ಪೇಡ್ ಮೊಬೈಲ್ ಕನೆಕ್ಷನ್ ಹೆಚ್ಚಳ ಸಾಧ್ಯತೆ: ಕ್ರಿಸಿಲ್ ವರದಿ