ಹೈದರಾಬಾದ್ (ತೆಲಂಗಾಣ):ತೆಲಂಗಾಣದ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಮತದಾರರನ್ನು ಓಲೈಸುವಲ್ಲಿ ರಾಜಕೀಯ ಪಕ್ಷಗಳು ಹೊಸ ಹೊಸ ಘೋಷಣೆಗಳನ್ನು ಮಾಡುತ್ತಿವೆ. ಹಾಲಿ ಮುಖ್ಯಮಂತ್ರಿ, ಬಿಆರ್‌ಎಸ್ ಅಧ್ಯಕ್ಷ ಕೆ. ಚಂದ್ರಶೇಖರ್ ರಾವ್, ತಮ್ಮ ಪಕ್ಷ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ, ಹೈದರಾಬಾದ್ನಲ್ಲಿ ಅಲ್ಪಸಂಖ್ಯಾತ ಯುವಕರಿಗಾಗಿ ವಿಶೇಷ ಮಾಹಿತಿ ತಂತ್ರಜ್ಞಾನ ಉದ್ಯಾನವನ (ಐಟಿ ಪಾರ್ಕ್) ಸ್ಥಾಪಿಸುವುದಾಗಿ ಪ್ರಕಟಿಸಿದ್ದಾರೆ.
ತೆಲಂಗಾಣದಲ್ಲಿ 119 ಸದಸ್ಯ ಬಲದ ವಿಧಾನಸಭೆಗೆ ನವೆಂಬರ್ 30ರಂದು ಮತದಾನ ನಡೆಯಲಿದೆ. ಇಂದು ಶಿಕ್ಷಣ ಸಚಿವೆ ಸಬಿತಾ ಇಂದ್ರಾರೆಡ್ಡಿ ಸ್ಪರ್ಧಿಸಿರುವ ಮಹೇಶ್ವರಂನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಕೆಸಿಆರ್, ನಮ್ಮ ಸರ್ಕಾರವು ಹಿಂದೂಗಳು ಹಾಗೂ ಮುಸ್ಲಿಮರನ್ನು ಎರಡು ಕಣ್ಣುಗಳಂತೆ ಪರಿಗಣಿಸುತ್ತದೆ. ಎಲ್ಲರನ್ನೂ ಜೊತೆಗೆ ಕರೆದೊಯ್ಯುತ್ತದೆ ಎಂದು ಹೇಳಿದ್ದಾರೆ.
ಇಂದು ನಾವು ನೀಡುತ್ತಿರುವ ಪಿಂಚಣಿಯನ್ನು ಮುಸ್ಲಿಮರು ಕೂಡ ಪಡೆಯುತ್ತಿದ್ದಾರೆ. ನಾವು ವಸತಿ ಶಾಲೆಗಳನ್ನು ತೆರೆದಿದ್ದೇವೆ. ಅದರಲ್ಲಿ ಮುಸ್ಲಿಂ ವಿದ್ಯಾರ್ಥಿಗಳು ಸಹ ಓದುತ್ತಿದ್ದಾರೆ. ನಾವು ನಮ್ಮೊಂದಿಗೆ ಎಲ್ಲರನ್ನು ಕರೆದುಕೊಂಡು ಹೋಗುತ್ತೇವೆ. ಈಗ ನಾವು ಮುಸ್ಲಿಂ ಯುವಕರ ಬಗ್ಗೆಯೂ ಯೋಚಿಸುತ್ತಿದ್ದೇವೆ. ಹೈದರಾಬಾದ್ ಬಳಿ ವಿಶೇಷ ಐಟಿ ಪಾರ್ಕ್ಅನ್ನು ಸ್ಥಾಪಿಸುತ್ತೇವೆ. ಪಹಾಡಿ ಶರೀಫ್ ಗ್ರಾಮದ ಬಳಿ ಐಟಿ ಪಾರ್ಕ್ ಬರಲಿದೆ ಎಂದು ಸಿಎಂ ತಿಳಿಸಿದರು.
ಇದೇ ವೇಳೆ, ಯಾವುದೇ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳಿಲ್ಲದೆ ತೆಲಂಗಾಣ 'ಶಾಂತಿಯುತ'ವಾಗಿದೆ ಎಂದು ಪ್ರತಿಪಾದಿಸಿದ ಕೆಸಿಆರ್, ಬಿಆರ್‌ಎಸ್ ಸರ್ಕಾರವು ತನ್ನ 10 ವರ್ಷಗಳ ಆಡಳಿತದಲ್ಲಿ ಅಲ್ಪಸಂಖ್ಯಾತರ ಅಭಿವೃದ್ಧಿಗೆ 12,000 ಕೋಟಿ ರೂಪಾಯಿಗಳನ್ನು ಖರ್ಚು ಮಾಡಿದೆ. ಈ ಕೆಸಿಆರ್ ಬದುಕಿರುವವರೆಗೂ ತೆಲಂಗಾಣ ಜಾತ್ಯತೀತ ರಾಜ್ಯವಾಗಿಯೇ ಇರುತ್ತದೆ ಎಂದರು.