ಪಾಟ್ನಾ (ಬಿಹಾರ): ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಬಿಹಾರ ಪ್ರವಾಸದಲ್ಲಿದ್ದಾರೆ. ಇಂದು ರಾಜಧಾನಿ ಪಾಟ್ನಾಕ್ಕೆ ಆಗಮಿಸಿದ ಅವರನ್ನು ಬಿಹಾರ ಮುಖ್ಯಮುಂತ್ರಿ ನಿತೀಶ್ ಕುಮಾರ್ ಹಾಗೂ ಉಪ ಮುಖ್ಯಮಂತ್ರಿ ತೇಜಶ್ವಿ ಯಾದವ್ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಸಿಎಂ ಕಚೇರಿಯಲ್ಲಿ ಉಭಯ ನಾಯಕರು ಮಾತುಕತೆ ನಡೆಸಿದ್ದಾರೆ.
ಈ ಸಂದರ್ಭದಲ್ಲಿ ಕೆಸಿಆರ್ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಅಗ್ನಿ ದುರಂತದ 12 ಸಂತ್ರಸ್ತ ಕುಟುಂಬಸ್ಥರು ಹಾಗೂ ಗಾಲ್ವಾನ್ ಕಣಿವೆಯ ಐವರು ಹುತಾತ್ಮ ಯೋಧರ ಕುಟುಂಬಗಳಿಗೆ ಪರಿಹಾರದ ಚೆಕ್ಗಳನ್ನು ವಿತರಿಸಿದರು.
ಭೇಟಿ ರಾಜಕೀಯ ಮಹತ್ವವೇನು?: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅವರನ್ನು ಎದುರಿಸಲು ಪ್ರತಿಪಕ್ಷಗಳ ನಾಯಕರನ್ನು ಒಗ್ಗೂಡಿಸಬೇಕೆಂಬ ಪ್ರಯತ್ನದಲ್ಲಿ ಕೆಸಿಆರ್ ಇದ್ದಾರೆ. ಇದರ ಭಾಗವಾಗಿಯೇ ಬಿಹಾರಕ್ಕೂ ಅವರು ಭೇಟಿ ಕೊಟ್ಟಿದ್ದಾರೆ. ಈ ಹಿಂದೆ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ತಮಿಳುನಾಡು ಸಿಎಂ ಎಂ ಕೆ ಸ್ವಾಲಿನ್, ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಜಾರ್ಖಂಡ್ ಸಿಎಂ ಹೇಮಂತ್ ಸೊರೇನ್ ಹಾಗೂ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರನ್ನು ಕೆಸಿಆರ್ ಭೇಟಿ ಮಾಡಿದ್ದರು. ಈಗ ನಿತೀಶ್ ಕುಮಾರ್ ಬಿಜೆಪಿ ಮೈತ್ರಿಯಿಂದ ಹೊರ ಬರುತ್ತಿದ್ದಂತೆ ಬಿಹಾರಕ್ಕೂ ಕಾಲಿಟ್ಟಿದ್ದು, ಹೊಸ ರಾಜಕೀಯ ಸಮೀಕರಣದ ಕುತೂಹಲ ಮೂಡಿಸಿದೆ.
ಇದನ್ನೂ ಓದಿ:ಸ್ಪೀಕರ್, ಡೆಪ್ಯೂಟಿ ಸ್ಪೀಕರ್ ವಿರುದ್ಧ ಜಾಮೀನು ರಹಿತ ವಾರಂಟ್... ಕಾರಣ ಏನು ಗೊತ್ತಾ?