ನವದೆಹಲಿ:ಕರ್ನಾಟಕ ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದು ನಾಲ್ಕು ದಿನಗಳು ಕಳೆದರೂ ನೂತನ ಮುಖ್ಯಮಂತ್ರಿ ಆಯ್ಕೆ ಗೊಂದಲ ಮುಂದುವರೆದಿದೆ. ಕಾಂಗ್ರೆಸ್ ಹೈಕಮಾಂಡ್ ಸಭೆ ಮೇಲೆ ಸಭೆಗಳನ್ನು ನಡೆಸುತ್ತಲೇ ಇದೆ. ನವದೆಹಲಿಯಲ್ಲಿ ಇಂದು ಉನ್ನತ ಮಟ್ಟದ ಸಭೆ ನಡೆದಿದ್ದು ಗೊಂದಲ ನಿವಾರಣೆಯಾಗುವ ಸಾಧ್ಯತೆ ದಟ್ಟವಾಗಿದೆ.
ಮುಖ್ಯಮಂತ್ರಿ ಪಟ್ಟಕ್ಕಾಗಿ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡುವೆ ಪೈಪೋಟಿ ಏರ್ಪಟ್ಟಿದೆ. ನವದೆಹಲಿಯಲ್ಲಿ ಇಬ್ಬರೂ ಬೀಡುಬಿಟ್ಟಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರೂ ತಮ್ಮ ಹಕ್ಕೊತ್ತಾಯ ಮುಂದುವರೆಸಿದ್ದು ಸಿಎಂ ವಿಚಾರ ಇದೀಗ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅಂಗಳಕ್ಕೆ ಬಂದಿದೆ. ಸೋನಿಯಾ ಗಾಂಧಿ ಅವರ ನಿವಾಸಕ್ಕೆ ತೆರಳುವ ಮುನ್ನ ಸುದ್ದಿಗಾರರೊಂದಿಗೆ ಮತನಾಡಿದ ಕೆ.ಸಿ.ವೇಣುಗೋಪಾಲ್, ಇಂದಿನ ಮಹತ್ವದ ಸಭೆಯಲ್ಲಿ ಒಳ್ಳೆಯ ನಿರ್ಧಾರ ಹೊರಬೀಳಲಿದೆ ಎಂದರು.
ಇನ್ನು ಇದೇ ವಿಚಾರವಾಗಿ ಮಾತನಾಡಿರುವ ಮಾಜಿ ಉಪ ಮುಖ್ಯಮಂತ್ರಿ ಜಿ. ಪರಮೇಶ್ವರ್, ಕರ್ನಾಟಕದ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಯಾವುದೇ ವಿವಾದವಿಲ್ಲ ಎಂದಿದ್ದಾರೆ. ಹೈಕಮಾಂಡ್ ಮುಖ್ಯಮಂತ್ರಿ ಆಯ್ಕೆ ವಿಚಾರದಲ್ಲಿ ಒಳ್ಳೆಯ ನಿರ್ಧಾರ ಕೈಗೊಳ್ಳಲಿದೆ. ಇಂದು ಅಥವಾ ನಾಳೆ ಈ ವಿಚಾರಕ್ಕೆ ತೆರೆ ಬೀಳಲಿದೆ ಎಂದು ಅವರು ತಿಳಿಸಿದರು. "ದಲಿತರು ಕಾಂಗ್ರೆಸ್ಗೆ ಮತ ಹಾಕುವವರು. ಪ್ರಾತಿನಿಧ್ಯ ಕೇಳುವುದು ಸಹಜ. ಪಕ್ಷದ ಹೈಕಮಾಂಡ್ನಲ್ಲಿರುವ ಎಲ್ಲರೂ ನನಗೆ ಗೊತ್ತು. ಡಾ. ಪರಮೇಶ್ವರ ಅವರನ್ನು ಮುಖ್ಯಮಂತ್ರಿ ಮಾಡಬೇಕಾದ ಪರಿಸ್ಥಿತಿ ಬಂದರೆ ಅವರು ಅದನ್ನು ಮಾಡುತ್ತಾರೆ. ಈ ವಿಚಾರದಲ್ಲಿ ನಾನು ಲಾಬಿ ಮಾಡುವುದಿಲ್ಲ" ಎಂದು ಇದೇ ವೇಳೆ ಹೇಳಿದರು. ಮಂಗಳವಾರ ಪಕ್ಷದ ಹೈಕಮಾಂಡ್ ಹೇಳಿದರೆ ಮುಖ್ಯಮಂತ್ರಿಯ ಜವಾಬ್ದಾರಿಯನ್ನು ಹೊರಲು ಸಿದ್ಧ ಎಂದು ಹೇಳುವ ಮೂಲಕ ಪರಮೇಶ್ವರ್ ಅಚ್ಚರಿ ಮೂಡಿಸಿದ್ದರು. ಇದರ ಬೆನ್ನಲ್ಲೇ ಪರೋಕ್ಷವಾಗಿ ತಾವೂ ಕೂಡ ಮುಖ್ಯಮಂತ್ರಿ ಆಕಾಂಕ್ಷಿ ಎಂಬ ಅಭಿಮತ ವ್ಯಕ್ತಪಡಿಸಿದ್ದಾರೆ.