ನೋಟುಗಳನ್ನೇ ನುಂಗಿದ ಚಾಲಾಕಿ ಅಧಿಕಾರಿ ಕಟ್ನಿ(ಮಧ್ಯಪ್ರದೇಶ):ಲಂಚಗುಳಿತನ ಕೆಲ ಅಧಿಕಾರಿಗಳಿಗೆ ಕರತಲಾಮಲಕ. ಸಾರ್ವಜನಿಕ ಸೇವೆಗಾಗಿ ಸರ್ಕಾರ ಇವರನ್ನು ಸಂಬಳ ಸಮೇತ ನೇಮಕ ಮಾಡಿದ್ದರೂ, ಜನರ ಕೆಲಸಗಳಿಗೆ ಲಂಚ ಪಡೆಯುತ್ತಾರೆ. ಹೀಗೆ ಲಂಚ ಪಡೆದು ಸಿಕ್ಕಿಬಿದ್ದಾಗ ಏನೇನೋ ಸರ್ಕಸ್ ಮಾಡುವುದನ್ನೂ ನಾವು ನೋಡಿದ್ದೇವೆ. ಆದರೆ, ಇಲ್ಲೊಬ್ಬ ಅಧಿಕಾರಿ ಮಾಡಿದ್ದು ನೋಡಿದರೆ ವಿಚಿತ್ರ ಅನ್ಸುತ್ತೆ. ಈತನ ಚಾಲಾಕಿತನಕ್ಕೆ ಅಧಿಕಾರಿಗಳೇ ಸುಸ್ತು ಹೊಡೆದಿದ್ದಾರೆ.
ಅದೇನಾಯ್ತಪ್ಪಾ ಎಂದರೆ, ಅಧಿಕಾರಿ ವ್ಯಕ್ತಿಯೊಬ್ಬರಿಂದ ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ರೆಡ್ಹ್ಯಾಂಡಾಗಿ ಹಿಡಿದಿದ್ದಾರೆ. ಇದರಿಂದ ತಪ್ಪಿಸಿಕೊಳ್ಳಲು ಈ ಪುಣ್ಯಾತ್ಮ ಹಣದ ನೋಟುಗಳನ್ನೇ ಗಬಗಬನೆ ನುಂಗಿದ್ದಾನೆ. ನೋಡ ನೋಡುತ್ತಿದ್ದಂತೆ ಅಧಿಕಾರಿಗಳ ಮುಂದೆ ಹಣ ಮಂಗಮಾಯ ಮಾಡಿದ್ದಾನೆ. ಲೋಕಾಯುಕ್ತ ಪೊಲೀಸರು ಹರಸಾಹಪಟ್ಟರೂ, ಹಣ ತೆಗೆಯಲು ಆಗಿಲ್ಲ. ಇನ್ನಾಗದು ಎಂದು ಕಡೆಗೆ ಚಾಲಾಕಿ ಅಧಿಕಾರಿಯನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಬಂದು ಚಿಕಿತ್ಸೆ ಕೊಡಿಸಿ ಕೊನೆಗೆ ಹೊಟ್ಟೆಯಿಂದ ಹಣದ ನೋಟುಗಳನ್ನು ಹೊರತೆಗೆದಿದ್ದಾರೆ.
ಘಟನೆಯ ವಿವರ:ಈ ವಿಚಿತ್ರ ಘಟನೆ ನಡೆದಿದ್ದು, ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ ಬಿಲಹಾರಿ ಎಂಬಲ್ಲಿ. ಕಂದಾಯ ಇಲಾಖೆಯ ಅಧಿಕಾರಿಯಾದ ಗಜೇಂದ್ರ ಸಿಂಗ್ ಹಣ ನುಂಗಿದಾತ. ಭೂ ಪ್ರಕರಣವೊಂದರಲ್ಲಿ ಲಂಚ ಪಡೆಯುತ್ತಿದ್ದಾಗ ಈ ಎಲ್ಲ ಘಟನೆ ನಡೆದಿದೆ. ಚಂದನ್ ಸಿಂಗ್ ಲೋಧಿ ಎಂಬಾತ ತಮ್ಮ ಭೂ ವಿವಾದ ಕುರಿತು ಅಧಿಕಾರಿಯಿಂದ ಪರಿಹಾರ ಕೇಳಿ ಬಂದಿದ್ದರು. ಇದಕ್ಕಾಗಿ ಗಜೇಂದ್ರ ಸಿಂಗ್ 5 ಸಾವಿರ ರೂಪಾಯಿ ಲಂಚದ ಬೇಡಿಕೆ ಇಟ್ಟಿದ್ದರು.
ತಮ್ಮ ಕೆಲಸಕ್ಕಾಗಿ ಲಂಚ ಕೇಳಿದ ಅಧಿಕಾರಿಗೆ ಬುದ್ಧಿ ಕಲಿಸಬೇಕು ಎಂದು ಚಂದನ್ ಸಿಂಗ್ ಅವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ. ಲೋಕಾಯುಕ್ತ ಪೊಲೀಸರು ಅಧಿಕಾರಿಯನ್ನು ಖೆಡ್ಡಾಕ್ಕೆ ಕೆಡವಲು ದಿನಾಂಕ ನಿಗದಿ ಮಾಡಿದ್ದಾರೆ. ಅದರಂತೆ ಚಂದನ್ ಸಿಂಗ್ ಅವರು ಅಧಿಕಾರಿಗೆ ಲಂಚದ ಹಣದ ಸಮೇತ ಬಿಲಹಾರಿ ಕಚೇರಿಗೆ ಬಂದಿದ್ದಾನೆ. 4,500 ಸಾವಿರ ರೂಪಾಯಿ ಪಡೆಯುತ್ತಿದ್ದಾಗ ಜೊತೆಗಿದ್ದ ಅಧಿಕಾರಿಗಳು ಅಧಿಕಾರಿಯನ್ನು ರೆಡ್ಹ್ಯಾಂಡಾಗಿ ಹಿಡಿದಿದ್ದಾರೆ.
ಇದರಿಂದ ಬೆದರಿದ ಆಫೀಸರ್ ಇನ್ನೇನು ತನ್ನ ಕೆಲಸಕ್ಕೆ ಕುತ್ತು ಬಂದಿದೆ ಎಂದು ಎಚ್ಚೆತವರೇ ಪೊಲೀಸರ ಎದುರೇ ಹಣದ ನೋಟುಗಳನ್ನು ಗುಳುಂ ಸ್ವಾಹ ಮಾಡಿದ್ದಾನೆ. ಯಾವುದೇ ಸಾಕ್ಷಿ ಸಿಗಬಾರದು ಎಂದು ಆತ ಹಣವನ್ನೇ ನುಂಗಿದ್ದಾನೆ. ಒಂದು ಕ್ಷಣ ಪೊಲೀಸರೇ ಇದರಿಂದ ಬೆಚ್ಚಿದ್ದಾರೆ. ಹೊಟ್ಟೆ ಸೇರಿದ್ದ ಹಣ ಹೊರತೆಗೆಯಲು ಏನೇನೋ ಸರ್ಕಸ್ ಮಾಡಲಾಗಿದೆ. ಆದರೂ ಅದ್ಯಾವುದೂ ಫಲ ನೀಡಿಲ್ಲ.
ಆಸ್ಪತ್ರೆಗೆ ದಾಖಲು:ಏನೇ ಮಾಡಿದರೂ ನುಂಗಿದ ನೋಟುಗಳನ್ನು ತೆಗೆಯಲು ಆಗದ ಕಾರಣ ಅಧಿಕಾರಿಯನ್ನು ವಶಕ್ಕೆ ಪಡೆದ ಪೊಲೀಸರು ಜಿಲ್ಲಾಸ್ಪತ್ರೆ ಕರೆ ತಂದಿದ್ದಾರೆ. ತಪಾಸಣೆ ನಡೆಸಿದ ಪೊಲೀಸರು ಹೊಟ್ಟೆಯಲ್ಲಿ ಹಣ ಇರುವುದನ್ನು ಖಾತ್ರಿ ಮಾಡಿದ್ದಾರೆ. ಬಳಿಕ ಚಿಕಿತ್ಸೆ ನೀಡಿ ಕೊನೆಗೂ ನೋಟುಗಳು ಹೊರಬರುವಂತೆ ಮಾಡಿದ್ದಾರೆ. ಬಳಿಕ ಅಧಿಕಾರಿಯನ್ನು ಲಂಚ ಪ್ರಕರಣದಲ್ಲಿ ಬಂಧಿಸಿದ್ದಾರೆ. ಏನೇ ಆಗಲಿ ಅಧಿಕಾರಿಯ ಚಾಲಾಕಿತನ ಮುಂದೆ ಪೊಲೀಸರೇ ಅರೆಕ್ಷಣ ಬೆಚ್ಚಿದ್ದು ಮಾತ್ರ ಸುಳ್ಳಲ್ಲ.
ಇದನ್ನೂ ಓದಿ:ಈ ಯುವತಿ ವರಿಸಿದ್ದು ಅಂತಿಂಥ ಗಂಡನ್ನಲ್ಲ, ಕೇಳಿದರೆ ಅಚ್ಚರಿಯಾಗೋದು ಪಕ್ಕಾ!