ನವದೆಹಲಿ: 1990ರಲ್ಲಿ ಜಮ್ಮು-ಕಾಶ್ಮೀರದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ಭೀಕರ ಹಿಂಸಾಚಾರ, ಸಾಮೂಹಿಕ ಹತ್ಯೆಯ ಕಥಾನಕ ಹೊಂದಿರುವ 'ದಿ ಕಾಶ್ಮೀರಿ ಫೈಲ್ಸ್' ಚಿತ್ರ ರಿಲೀಸ್ ಆದಾಗಿನಿಂದಲೂ ಪರ-ವಿರೋಧಾಭಾಸಗಳು ವ್ಯಕ್ತವಾಗುತ್ತಿವೆ. ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷಗಳ ನಡುವಿನ ವಾಕ್ಸಮರಕ್ಕೂ ಇದು ದಾರಿ ಮಾಡಿಕೊಟ್ಟಿದೆ. ಇದೀಗ ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಶ್ಮೀರಿ ಪಂಡಿತರ ಹತ್ಯೆಯ ಬಗ್ಗೆ ವಿಸ್ತೃತ ತನಿಖೆ ನಡೆಸುವಂತೆ ರೂಟ್ಸ್ ಇನ್ ಕಾಶ್ಮೀರ ಸಂಸ್ಥೆ ಸುಪ್ರೀಂಕೋರ್ಟ್ನಲ್ಲಿ ಪರಿಹಾರಾತ್ಮಕ(ಕ್ಯುರೇಟಿವ್) ಅರ್ಜಿ ಸಲ್ಲಿಸಿದೆ.
ಕಾಶ್ಮೀರಿ ಪಂಡಿತರ ಮೇಲಿನ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ(ಸಿಬಿಐ) ಅಥವಾ ರಾಷ್ಟ್ರೀಯ ತನಿಖಾ ಸಂಸ್ಥೆ(ಎನ್ಐಎ)ಯಿಂದ ತನಿಖೆ ನಡೆಸುವಂತೆ ರೂಟ್ಸ್ ಇನ್ ಕಾಶ್ಮೀರ ಸುಪ್ರೀಂಕೋರ್ಟ್ಗೆ ಮನವಿ ಮಾಡಿದೆ. ಈ ಅರ್ಜಿಯನ್ನು ಸರ್ವೋಚ್ಛ ನ್ಯಾಯಾಲಯ ವಿಚಾರಣೆ ನಡೆಸುವ ಸಾಧ್ಯತೆ ಇದೆ.
ಇದನ್ನೂ ಓದಿ:ಚಲಿಸುತ್ತಲೇ ಸ್ವಯಂಚಾಲಿತ ಚಾರ್ಜ್.. ಸೋಲಾರ್ ಬೈಕ್ ಅಭಿವೃದ್ಧಿಪಡಿಸಿದ MSc ವಿದ್ಯಾರ್ಥಿ!
ಪ್ರಕರಣಕ್ಕೆ ಸಂಬಂಧಿಸಿದಂತೆ 2017ರಲ್ಲಿ ಪರಿಹಾರಾತ್ಮಕ ಅರ್ಜಿ ಸಲ್ಲಿಕೆ ಮಾಡಲಾಗಿತ್ತು. ಆದರೆ, ಘಟನೆ ನಡೆದು ಅನೇಕ ವರ್ಷಗಳು ಕಳೆದು ಹೋಗಿವೆ ಎಂಬ ಕಾರಣ ನೀಡಿ ಸುಪ್ರೀಂಕೋರ್ಟ್ ಅರ್ಜಿ ವಜಾಗೊಳಿಸಿತ್ತು. ಜೊತೆಗೆ, ತನಿಖೆ ನಡೆಸಲು ಸಮಗ್ರ ಸಾಕ್ಷ್ಯ ಸಂಗ್ರಹಿಸುವುದು ಕಷ್ಟ ಎಂದು ಹೇಳಿತ್ತು. 1989ರಿಂದ 1998ರ ಅವಧಿಯಲ್ಲಿ 700ಕ್ಕೂ ಹೆಚ್ಚು ಕಾಶ್ಮೀರಿ ಪಂಡಿತರ ಹತ್ಯೆ ಮಾಡಲಾಗಿತ್ತು ಎಂದು ಹೇಳಲಾಗಿದ್ದು, ಆ ಸಂದರ್ಭದಲ್ಲಿ ಯಾವುದೇ ರೀತಿಯ ಎಫ್ಐಆರ್ ದಾಖಲಾಗಿಲ್ಲ. ಹೀಗಾಗಿ ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ನಡೆದಿರಲಿಲ್ಲ.
ಇದೀಗ ದಿ ಕಾಶ್ಮೀರಿ ಫೈಲ್ಸ್ ಚಿತ್ರ ಕಾಶ್ಮೀರಿ ಪಂಡಿತರ ಮೇಲೆ ನಡೆದಿರುವ ಕ್ರೂರ ಘಟನೆಗಳನ್ನಾಧರಿಸಿ ತೆರೆ ಕಂಡಿದ್ದು, ಇದನ್ನು ಆಧಾರವಾಗಿಟ್ಟುಕೊಂಡು ಸುಪ್ರೀಂಕೋರ್ಟ್ನಲ್ಲಿ ವಿಚಾರಣೆ ಒತ್ತಾಯಿಸಿ ಅರ್ಜಿ ಸಲ್ಲಿಸಲಾಗಿದೆ.