ನವದೆಹಲಿ :ಉದ್ದೇಶಿತ ಹತ್ಯೆಗಳಿಂದಾಗಿ ಕಾಶ್ಮೀರಿ ಪಂಡಿತರು ಮತ್ತೆ ಜಮ್ಮು-ಕಾಶ್ಮೀರ ಕಣಿವೆಯನ್ನು ತೊರೆಯುವಂತೆ ಆಗುತ್ತಿದೆ. ಬಿಜೆಪಿಗೆ ಕಾಶ್ಮೀರದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ ಎಂದು ದೆಹಲಿ ಮುಖ್ಯಮಂತ್ರಿ, ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ವಾಗ್ದಾಳಿ ನಡೆಸಿದ್ದಾರೆ.
ದೆಹಲಿಯ ಜಂತರ್ ಮಂತರ್‌ನಲ್ಲಿ ಆಮ್ ಆದ್ಮಿ ಪಕ್ಷದಿಂದ ಹಮ್ಮಿಕೊಂಡಿರುವ ಜನಾಕ್ರೋಶ ರ್‍ಯಾಲಿ ಉದ್ದೇಶಿಸಿ ಮಾತನಾಡಿದ ಅವರು, ಕಾಶ್ಮೀರದಲ್ಲಿ 1990ರಲ್ಲಿ ಏನಾಗಿತ್ತೋ, ಇಂದು ಅದೇ ಮರುಕಳುಹಿಸುತ್ತಿದೆ. ಕಾಶ್ಮೀರ ಪಂಡಿತರು ತಮ್ಮ ಮನೆಗಳನ್ನು ತೊರೆಯುವ ವಾತಾವರಣ ನಿರ್ಮಾಣವಾಗಿದೆ.
ಬಿಜೆಪಿಗೆ ಕಾಶ್ಮೀರದ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಬಿಜೆಪಿಯವರಿಗೆ ಕೊಳಕು ರಾಜಕೀಯ ಮಾತ್ರ ಗೊತ್ತು. ದಯವಿಟ್ಟು ಕಾಶ್ಮೀರದ ಹೆಸರಲ್ಲಿ ರಾಜಕೀಯ ಮಾಡಬೇಡಿ ಎಂದು ಟೀಕಿಸಿದ್ಧಾರೆ. ಅಲ್ಲದೇ, ಕಾಶ್ಮೀರದಲ್ಲಿನ ಪರಿಸ್ಥಿತಿಯನ್ನು ನಿಭಾಯಿಸುವ ತನ್ನ ಯೋಜನೆಯನ್ನು ಕೇಂದ್ರ ಸರ್ಕಾರವು ಸಾರ್ವಜನಿಕರಿಗೆ ತಿಳಿಸಬೇಕು. ಜೊತೆಗೆ ಕಾಶ್ಮೀರಿ ಪಂಡಿತರು ಕಾಶ್ಮೀರದ ಹೊರಗೆ ಕೆಲಸ ಮಾಡಲು ಸಾಧ್ಯವಿಲ್ಲ ಎಂಬ ನಿಬಂಧನೆಯನ್ನು ರದ್ದುಗೊಳಿಸಬೇಕು. ಪಂಡಿತರ ಎಲ್ಲ ಬೇಡಿಕೆಗಳನ್ನು ಪೂರೈಸಬೇಕು ಮತ್ತು ಅವರಿಗೆ ಭದ್ರತೆ ಒದಗಿಸಬೇಕೆಂದು ಒತ್ತಾಯಿಸಿದ್ದಾರೆ.
ಪಾಕ್ ವಿರುದ್ಧವೂ ವಾಗ್ದಾಳಿ : ಇದೇ ವೇಳೆ ಕಾಶ್ಮೀರದ ಪರಿಸ್ಥಿತಿ ವಿಷಯ ಕುರಿತಾಗಿ ಪಾಕಿಸ್ತಾನದ ವಿರುದ್ಧವೂ ಕೇಜ್ರಿವಾಲ್ ವಾಗ್ದಾಳಿ ಮಾಡಿದ್ದಾರೆ. ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಬೆಂಬಲಿಸುತ್ತಿದೆ. ಪಾಕ್ ಇಂತಹ ಕ್ಷುಲ್ಲಕ ತಂತ್ರಗಳನ್ನು ನಿಲ್ಲಿಸಬೇಕು. ಕಾಶ್ಮೀರ ಯಾವಾಗಲೂ ಭಾರತದ ಭಾಗವೇ ಆಗಿರುತ್ತದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಸ್ನಾನಕ್ಕೆ ನದಿಗಿಳಿದ ನಾಲ್ವರು ಹುಡುಗಿಯರು, ಮೂವರು ಮಹಿಳೆಯರು ನೀರುಪಾಲು