ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ಕೇಂದ್ರಾಡಳಿತ ಪ್ರದೇಶವಾದ ಕಣಿವೆ ನಾಡು ಜಮ್ಮು ಮತ್ತು ಕಾಶ್ಮೀರ ಹೊಸ ದಾಖಲೆ ಬರೆದಿದೆ. ಸಾಮಾಜಿಕ ಕಟ್ಟುಪಾಡುಗಳನ್ನು ತೊಡೆದುಹಾಕುವ ಉದ್ದೇಶ ಹಾಗೂ ವಾಹನ ಸ್ಪರ್ಧೆಯಲ್ಲಿ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲು 'ಜೆಕೆ ಆಟೋಎಕ್ಸ್ ವುಮೆನ್' ಎಂಬ ಹೆಸರಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಮಾತ್ರ ಸೀಮಿತವಾದ ಕಾರ್ ರೇಸ್ ಸ್ಪರ್ಧೆ ಏರ್ಪಡಿಸಿದ್ದು, ಯಶಸ್ವಿಯಾಗಿದೆ.
ಪುರುಷ ಪ್ರಾಬಲ್ಯದ ಮೋಟಾರ್ ಸ್ಪೋರ್ಟ್ ಕ್ಷೇತ್ರದಲ್ಲಿ ಈಗಾಗಲೇ ಹೆಣ್ಣುಮಕ್ಕಳು ತಮ್ಮ ಸಾಮರ್ಥ್ಯ ಸಾಬೀತುಪಡಿಸುತ್ತಿದ್ದಾರೆ. ಅನೇಕ ಅಡೆತಡೆಗಳನ್ನೂ ಮೀರಿ ವಾಹನ ಕ್ರೀಡೋದ್ಯಮಕ್ಕೆ ತಮ್ಮದೇ ಆದ ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಅನೇಕ ಮಹಿಳಾ ಚಾಲಕರು ಹಲವಾರು ಸ್ಪರ್ಧೆಗಳಲ್ಲಿ ಅಗ್ರಸ್ಥಾನಗಳೊಂದಿಗೆ ಮುನ್ನಡೆಯುತ್ತಿದ್ದಾರೆ. ಈ ಮೂಲಕ ರೇಸಿಂಗ್ ಜಗತ್ತಿನಲ್ಲಿ ತಮ್ಮ ಅಸ್ತಿತ್ವವನ್ನು ಮಹಿಳೆಯರು ಅನುಭವಿಸುತ್ತಿದ್ದಾರೆ.
ಇದೀಗ ಕಾಶ್ಮೀರವು ಮೋಟಾರ್ ಸ್ಪೋರ್ಟ್ನಲ್ಲಿನ ತಾರತಮ್ಯಗಳನ್ನು ನಿವಾರಿಸಿ, ಮಹಿಳೆಯರನ್ನು ಉತ್ತೇಜಿಸುವ ಸುದುದ್ದೇಶದಿಂದ ಪ್ರಪ್ರಥಮ 'ಜೆಕೆ ಆಟೋಎಕ್ಸ್ ವುಮೆನ್' ಸ್ಪರ್ಧೆಗೆ ಸಾಕ್ಷಿಯಾಗಿದೆ. ಜಮ್ಮು ಮತ್ತು ಕಾಶ್ಮೀರ ಮೋಟಾರ್ ಸ್ಪೋರ್ಟ್ಸ್ ಫೆಡರೇಶನ್ ಹಾಗೂ ಫೆಡರೇಶನ್ ಆಫ್ ಮೋಟಾರ್ ಸ್ಪೋರ್ಟ್ಸ್ ಕ್ಲಬ್ ಆಫ್ ಇಂಡಿಯಾ ಒಟ್ಟಾಗಿ ಸಂಘಟಿಸಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ.